ನಮ್ಮಲ್ಲೇ ನೀರಿಲ್ಲ, ಇನ್ನು ನಾವೆಲ್ಲಿಂದ ನೀರು ಬಿಡೋದು: ಸಿದ್ದರಾಮಯ್ಯ

ಬೆಂಗಳೂರು: ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ನಮ್ಮಲ್ಲೇ ನೀರಿಲ್ಲ. ಇನ್ನು ನಾವೆಲ್ಲಿಂದ ಅವರಿಗೆ ನೀರು ಕೊಡುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ನಮ್ಮ ವಕೀಲರ ಜತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ನೀರು ಬಿಟ್ಟರೆ ಹೋರಾಟದ ಎಚ್ಚರಿಕೆ

ಈಗಾಗಲೇ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. ಬರಗಾಲದಿಂದಾಗಿ ರೈತರು ಬಳಲುತ್ತಿದ್ದಾರೆ. ಇದರಿಂದಾಗಿ ರೈತರ ಆತ್ಮಹತ್ಯೆಗಳಾಗಿವೆ. ಮಾನ್ಯ ನ್ಯಾಯಾಧೀಶರು ಈಗಾಗಲೇ ಹತ್ತು ದಿನಗಳೊಳಗೆ ನೀರು ಬಿಡುವಂತೆ ನೀಡಿರುವ ತೀರ್ಪನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸುತ್ತೇವೆ. ಈ ಕುರಿತು ರಾಜ್ಯದ ಪರ ವಕೀಲರು ಸುಪ್ರೀಂಗೆ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಯಾರದೋ ಕೋಪವನ್ನು ಇನ್ಯಾರದ್ದೋ ಮೇಲೆ ತೀರಿಸಿಕೊಂಡಂತಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನಾಲ್ಕು ಟಿಎಂಸಿ ನೀರು ಬಿಡಬಾರದು. ಬಿಟ್ಟರೆ ಮತದಾನ ಬಹಿಷ್ಕರಿಸಿ ಅಣೆಕಟ್ಟುಗಳ ಮುಂದೆ ಮಲಗುವ ಚಳವಳಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ನಮಗೇ ಕುಡಿಯಲು ನೀರಿಲ್ಲ, ಬೆಳೆಗೂ ಇಲ್ಲ

ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ತಮ್ಮೇಗೌಡ ಮಾತನಾಡಿ, ನಮಗೆ ಕುಡಿಯಲು, ಬೆಳೆಗೆ ನೀರು ಸಾಕಾಗುತ್ತಿಲ್ಲ. ಡೆಡ್​ ಸ್ಟೋರೇಜ್ ವಾಟರ್​ ಅನ್ನು ಕುಡಿಯಲು ಮಾತ್ರ ಉಪಯೋಗಿಸಲಾಗುತ್ತದೆ. ಬೆಳೆಗಳಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ. ಇದರಿಂದ ನಮ್ಮ ರೈತರು ಬೆಳೆದ ಬೆಳೆ ಒಣಗಿ ಹೋಗುತ್ತದೆ. ವಾಸ್ತವ ಪರಿಸ್ಥಿತಿ ವಿವರಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *