ಸರಗೂರು: ತಾಲೂಕಿನ ಕಂದೇಗಾಲ ಮಹದೇಶ್ವರಸ್ವಾಮಿ ಕೊಂಡೋತ್ಸವ ಹಾಗೂ ದನಗಳ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದಲ್ಲಿ ಬೆಳಗ್ಗೆ 6ಕ್ಕೆ ಸಹಸ್ರ ಬಿಲ್ವಾರ್ಚನೆ, 9ಕ್ಕೆ ಮಹಾಮಂಗಳಾರತಿ, 10ಕ್ಕೆ ಹುಲಿವಾಹನದಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದ ಉತ್ಸವ ಮೂರ್ತಿಯನ್ನು ಮಂಗಳವಾದ್ಯ ಮತ್ತು ಗ್ರಾಮಸ್ಥರು ಸಮ್ಮುಖದಲ್ಲಿ ವೀರಗಾಸೆ ಕುಣಿತದೊಂದಿಗೆ ಪ್ರಮುಖ ಬೀದಿಗಳಲ್ಲಿ ದೇವಸ್ಥಾನದ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.
ದೇವಸ್ಥಾನವನ್ನು ಹಸಿರು ತಳಿರು-ತೋರಣ, ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ ಎಚ್.ಡಿ.ಕೋಟೆ, ಸರಗೂರು ಮತ್ತು ಮೈಸೂರು ನಗರದಿಂದ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ದನಗಳ ಪ್ರದರ್ಶನ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಸಮಿತಿ ಅಧ್ಯಕ್ಷ ಪಲೇಟ್ ರಾಜಪ್ಪ, ಪ್ರದಾನ ಕಾರ್ಯದರ್ಶಿ ಸೋಮಣ್ಣ, ಗೌರವಾಧ್ಯಕ್ಷ ಚಿಕ್ಕವೀರನಾಯಕ, ಶಿವನಾಗು, ಕೆ.ಜಿ. ಗೋಪಾಲಯ್ಯ, ಮಹದೇವಸ್ವಾಮಿ ಕೆ.ಪಿ., ಮರಿದಾಸ, ಕಾಳಸ್ವಾಮಿ, ಗ್ರಾಪಂ ರವಿ ಅರಸು, ರುದ್ರಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಇದ್ದರು.