ಬರದ ಜಿಲ್ಲೆಯಲ್ಲಿ ಮೇವಿಗಿಲ್ಲ ಬರ!

2 Min Read
ಬರದ ಜಿಲ್ಲೆಯಲ್ಲಿ ಮೇವಿಗಿಲ್ಲ ಬರ!

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರ ಪೀಡಿತ ರಾಜ್ಯ ಸರ್ಕಾರ ಘೊಷಿಸಿದೆ. ಆದರೆ, ಜಿಲ್ಲೆಯಲ್ಲಿ ಜಾನುವಾರುಗಳ ಆಹಾರಕ್ಕೆ ಸದ್ಯ ಬರದ ಛಾಯೆ ತಟ್ಟಿಲ್ಲ.

ಜಿಲ್ಲೆಯ ಪಶು ಸಂಗೋಪನಾ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಇನ್ನೂ 36 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ. ಇಷ್ಟು ಮೇವು ಖಾಲಿ ಆಗುವವರೆಗೆ ಮುಂದಿನ ಮಳೆಗಾಲ ಆರಂಭವಾಗುತ್ತದೆ. ಆಗ ಮತ್ತೆ ಹಸಿರು ಹುಲ್ಲು ಸೇರಿ ಜಾನುವಾರುಗಳಿಗೆ ಇತರ ಆಹಾರ ಲಭ್ಯವಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.

5.89 ಲಕ್ಷ ಟನ್ ಮೇವು ಸಂಗ್ರಹ

ಜಿಲ್ಲೆಯಲ್ಲಿ ಎತ್ತು, ಆಕಳು, ಎಮ್ಮೆ ಸೇರಿ 3,46,561 ಹಾಗೂ ಕುರಿ, ಮೇಕೆ ಸೇರಿ 4,58,474 ಜಾನುವಾರುಗಳಿವೆ. ಇವುಗಳಿಗೆ ಒಂದು ವಾರಕ್ಕೆ 16,159 ಟನ್ ಮೇವು ಬೇಕು. ಸದ್ಯ 5,89,070 ಟನ್ ಮೇವು ಸಂಗ್ರಹವಿದೆ. ಇದರ ಪ್ರಕಾರ 36 ವಾರಕ್ಕೆ (ಅಂದಾಜು 9 ತಿಂಗಳು) ಆಗುವಷ್ಟು ಮೇವು ಸಂಗ್ರಹವಿದೆ.

ಮೇವು ಸಂಗ್ರಹ ಹೇಗೆ…?

ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಬರಗಾಲ ಎದುರಾಗಿದೆ. ರೈತರು ಮೇ ತಿಂಗಳಲ್ಲಿ ಭಾರಿ ಮಳೆ ಬಂದ ಹಿನ್ನೆಲೆಯಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಸೇರಿ ವಿವಿಧ ಬೀಜಗಳನ್ನು ಬಿತ್ತನೆ ಮಾಡಿದ್ದರು. ಅವುಗಳು ಮೊಣಕಾಲು ಎತ್ತರಕ್ಕೆ ಬೆಳೆಯುತ್ತಿದ್ದಂತೆ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆ ಕೊರತೆ ಎದುರಾಯಿತು.

ಆದರೂ ಆಗಾಗ ಸುರಿದ ಅಲ್ಪಸ್ವಲ್ಪ ಮಳೆಗೆ ಬೆಳೆಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದವು. ಆದರೆ, ಬೆಳೆಗಳು ತೆನೆ ಕಟ್ಟಲಿಲ್ಲ. ಇದರಿಂದಾಗಿ ಫಸಲು ದೊರೆಯದಿದ್ದರೂ ಜಾನುವಾರುಗಳಿಗೆ ಮೇವು ಸಂಗ್ರಹವಾಗಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಮೆಕ್ಕೆಜೋಳ ಸೇರಿ ಮೇವು ಹೆಚ್ಚಾಗಿ ದೊರೆಯುವಂತಹ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬಾರಿ ಬೆಳೆ ಬಾರದಿದ್ದರೂ ಮೇವು ಚೆನ್ನಾಗಿ ಬೆಳೆದಿದೆ. ಆದ್ದರಿಂದ ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ. ಆದರೆ, ದೊಡ್ಡ ಪ್ರಮಾಣದ ರೈತರು ತಾವು ಬೆಳೆದ ಮೆಕ್ಕೆಜೋಳ ಸೇರಿ ಇತರ ಬೆಳೆಗಳ ಮೇವನ್ನು ಜಾನುವಾರು ಇರುವ ರೈತರಿಗೆ ಕೊಟ್ಟರೆ ಮೇವು ಸಂಗ್ರಹ ಇನ್ನೂ ಅಧಿಕವಾಗಲಿದೆ. ಅಥವಾ ಅವರೇ ಸಂಗ್ರಹ ಮಾಡಿಟ್ಟುಕೊಂಡರೂ ಉಪಯೋಗಕ್ಕೆ ಬರುತ್ತದೆ.

| ಡಾ. ಎಸ್.ವಿ. ಸಂತಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ, ಹಾವೇರಿ

ಆರಂಭದಲ್ಲಿ ಬಂದ ಮಳೆ ಬೆಳೆಗಳು ತೆನೆ ಬಿಡುವ ಸಮಯಕ್ಕೆ ಬರಲಿಲ್ಲ. ಅಂತೂ ಈ ಬಾರಿ ಮೇವು ಸಂಗ್ರಹವಿದೆ. ಹೀಗಾಗಿ ಬೆಳೆ ಕಳೆದುಕೊಂಡ ನಾವು ಎತ್ತು, ಆಕಳು, ಎಮ್ಮೆಗಳಿಗೆ ಮೇವು ನೀಡುತ್ತಿದ್ದೇವೆ. ಸರ್ಕಾರ ಬರ ಪರಿಹಾರವನ್ನು ಕೂಡಲೇ ಒದಗಿಸಬೇಕು. ಇಲ್ಲವಾದರೆ ರೈತರ ಬದುಕು ಬಹಳ ದುಸ್ತರವಾಗಲಿದೆ.

| ದಿಳ್ಳೆಪ್ಪ ಕಂಬಳಿ, ರಾಹುತನಕಟ್ಟಿ ರೈತ

See also  ಎತ್ತು ಮೈ ತೊಳೆಯಲು ಹೋದ ಬಾಲಕ ಸಾವು
Share This Article