ಬಾಣಸಿಗನಿಗೆ ಹನಿಟ್ರ್ಯಾಪ್,​ 74 ಲಕ್ಷ ರೂ. ಪಂಗನಾಮ

ಬೆಂಗಳೂರು: ಕೇಟರಿಂಗ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯನ್ನು ಹನಿಟ್ರ್ಯಾಪ್​​​ ಬಲೆಗೆ ಬೀಳಿಸಿ 73.55 ಲಕ್ಷ ರೂ. ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೇರಳ ಮೂಲದ ಕೃಷ್ಣದಾಸ್ ಎಂಬುವವರು ಶೆಟ್ಟಿಹಳ್ಳಿಯಲ್ಲಿ ಕೇಟರಿಂಗ್ ವ್ಯವಹಾರ ನಡೆಸುತ್ತಿದ್ದರು. ಅವರು ಇನ್ನೊಂದು ಮನೆಯನ್ನು ಬಾಡಿಗೆಗೆ ನೀಡಿದ್ದರು. ಸ್ನೇಹಿತೆಯನ್ನು ಭೇಟಿಯಾಗಲು ಇಲ್ಲಿಗೆ ಬರುತ್ತಿದ್ದ ಬೇಬಿರಾಣಿ ಎಂಬ ಮಹಿಳೆ ಪರಿಚಯವಾಗಿತ್ತು.

ಮಗನ ವ್ಯಾಸಂಗಕ್ಕೆಂದು ಕೃಷ್ಣದಾಸ್ ಬಳಿ 30 ಸಾವಿರ ರೂ. ಪಡೆದಿದ್ದ ಬೇಬಿರಾಣಿ, ಬಳಿಕ ಗಂಡನಿಗೆ ಚಿಕಿತ್ಸೆ ಕೊಡಿಸಲು 2.75 ಲಕ್ಷ ರೂ. ಪಡೆದಿದ್ದಳು. ಕೆಲ ತಿಂಗಳ ಬಳಿಕ ಬ್ಯೂಟಿ ಪಾರ್ಲರ್ ತೆರೆಯಲು 3 ಲಕ್ಷ ರೂ. ಪಡೆದಿದ್ದಳು. 2 ತಿಂಗಳ ಬಳಿಕ ಮನೆ ಭೋಗ್ಯಕ್ಕೆಂದು 3 ಲಕ್ಷ ರೂ. ಕೇಳಿದ್ದಳು. ಅಷ್ಟು ಹಣ ಇಲ್ಲವೆಂದು ಕೃಷ್ಣದಾಸ್ ಹೇಳಿದ್ದರು. ‘ನಿಮ್ಮ ಜತೆಗಿರುವ ಫೋಟೋ ನನ್ನ ಬಳಿಯಿದೆ’ ಎಂದು ಬೆದರಿಸಿದ ಬೇಬಿರಾಣಿ, 3 ಲಕ್ಷ ರೂ. ವಸೂಲಿ ಮಾಡಿದ್ದಳು.

ಕೊಲೆ ಕೇಸ್ ಬೆದರಿಕೆ: ಕೆಲ ದಿನ ಬಳಿಕ ಕೃಷ್ಣದಾಸ್ ಮೊಬೈಲ್​ಗೆ ಕರೆ ಮಾಡಿದ ಪಟೇಲ್ ಬಾಬು, ‘ನಿಮ್ಮ ಗೆಳತಿ ಬೇಬಿರಾಣಿ ಕೊಲೆಯಾಗಿದೆ. ನಿಮ್ಮ ವಿರುದ್ಧ ಆಕೆಯ ಸಂಬಂಧಿಕರು ದೂರು ಕೊಟ್ಟಿದ್ದಾರೆ. ಕೇಸ್ ದಾಖಲಿಸಿ ಆರೆಸ್ಟ್ ಮಾಡುತ್ತೇವೆ. ಇನ್ಸ್​ಪೆಕ್ಟರ್​ಗೆ 10 ಲಕ್ಷ ರೂ. ಮತ್ತು ಲಕ್ಷ್ಮಿನಾರಾಯಣ ಗೌಡ ಎಂಬುವರಿಗೆ 7 ಲಕ್ಷ ರೂ. ಕೊಟ್ಟರೆ ಕೇಸ್​ನಿಂದ ಕೈಬಿಡಲಾಗುತ್ತದೆ’ ಎಂದು ಹೇಳಿದ್ದ. ಕೃಷ್ಣದಾಸ್ 17 ಲಕ್ಷ ರೂ. ಕೊಟ್ಟು ಸುಮ್ಮನಾಗಿದ್ದರು. ಸೆಪ್ಟೆಂಬರ್​ನಲ್ಲಿ ಕೃಷ್ಣದಾಸ್ ಮೊಬೈಲ್​ಗೆ ಕರೆ ಮಾಡಿದ ಪಟೇಲ್ ಬಾಬು, ‘ಕೊಲೆ ಪ್ರಕರಣ ಮತ್ತೆ ರೀಓಪನ್ ಆಗೋ ರೀತಿ ಇದೆ. ಎಲ್ಲರಿಗೂ ಬಾಯಿಮುಚ್ಚಿಸಲು 20 ಲಕ್ಷ ರೂ. ಕೊಡಿ’ ಎಂದು ಡಿಮ್ಯಾಂಡ್ ಮಾಡಿದ್ದ. ಆಗ ಕೃಷ್ಣದಾಸ್, ಆಸ್ತಿಪತ್ರ ಅಡವಿಟ್ಟು 20 ಲಕ್ಷ ರೂ. ನೀಡಿದ್ದರು.

ಅಕ್ಟೋಬರ್​ನಲ್ಲಿ ಕೃಷ್ಣದಾಸ್​ಗೆ ಕರೆ ಮಾಡಿದ ಬೇಬಿರಾಣಿ ಪುತ್ರಿ ಪ್ರೀತಿ, ‘ನನ್ನ ತಾಯಿಯನ್ನು ನೀವೇ ಕೊಲೆ ಮಾಡಿ ಕೇಸ್ ಮುಚ್ಚಿ ಹಾಕಿದ್ದೀರಿ. ನ್ಯಾಯಕ್ಕಾಗಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಕೊಡುತ್ತೇನೆ’ ಎಂದು ಹೆದರಿಸಿದ್ದಳು. ಭಯಗೊಂಡ ಕೃಷ್ಣದಾಸ್ ಆಕೆಗೆ 20 ಲಕ್ಷ ರೂ. ಕೊಟ್ಟಿದ್ದರು. ನವೆಂಬರ್​ನಲ್ಲಿ ಮತ್ತೆ ಕರೆ ಮಾಡಿದ ಪಟೇಲ್ ಬಾಬು, ಬೇಬಿರಾಣಿ ಕೊಲೆ ಪ್ರಕರಣದ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ. ಕೇಸ್ ಮುಚ್ಚಿ ಹಾಕಲು ನ್ಯಾಯಾಧೀಶರಿಗೆ 65 ಲಕ್ಷ ಕೊಡಬೇಕು. ಆದಷ್ಟು ಬೇಗ ಹಣ ಕೊಡಿ ಎಂದು ಸೂಚಿಸಿದ್ದ. ಕೃಷ್ಣದಾಸ್​ಗೆ ಅನುಮಾನ ಬಂದು ಕೊನೆಗೆ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಪಡೆಯಲು ಬಂದವರು ಜೈಲಿಗೆ

ಹನಿಟ್ರಾ್ಯಪ್ ಕೇಸ್ ದಾಖಲಿಸಿಕೊಂಡ ಪೊಲೀಸರು, ಕೃಷ್ಣದಾಸ್ ಕಡೆಯಿಂದ ಪಟೇಲ್ ಬಾಬುಗೆ ಕರೆ ಮಾಡಿಸಿ 65 ಲಕ್ಷ ರೂ. ಕೊಡುವುದಾಗಿ ಹೇಳಿಸಿದ್ದರು. ಪಟೇಲ್ ಮತ್ತು ಪ್ರಸಾದ್ ಹಣ ಪಡೆಯಲು ಕಾರಿನಲ್ಲಿ ಬಂದಾಗ ಪೊಲೀಸರು ದಾಳಿ ನಡೆಸಿ ಬೇಬಿರಾಣಿ, ಮಗಳು ಪ್ರೀತಿ ಸಮೇತ ನಾಲ್ವರನ್ನು ಬಂಧಿಸಿದ್ದಾರೆ.

2 ಮಹಡಿಯ ಮನೆ ನಿರ್ಮಾಣ

ಕೃಷ್ಣದಾಸ್​ನಿಂದ ವಸೂಲಿ ಮಾಡಿದ್ದ ಹಣದಲ್ಲಿ ಬೇಬಿರಾಣಿ 2 ಅಂತಸ್ತಿನ ಮನೆ ನಿರ್ವಿುಸುತ್ತಿದ್ದಳು. ಸದ್ಯ ಮೋಲ್ಡಿಂಗ್ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು

ತಾಯಿ, ಮಗಳು, ಅಳಿಯ ಸೇರಿ ನಾಲ್ವರನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿಯ ಬೇಬಿರಾಣಿ(39), ಈಕೆಯ ಪುತ್ರಿ ಪ್ರೀತಿ(23), ಅಳಿಯ ಪಟೇಲ್ ಬಾಬು(33) ಮತ್ತು ಈತನ ತಮ್ಮ ಪ್ರಸಾದ್(28) ಬಂಧಿತರು.

ನಕಲಿ ಎಫ್​ಐಆರ್

ಬೇಬಿರಾಣಿ ಮನೆ ಮೇಲೆ ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿದಾಗ ಖಾಲಿ ಹಾಳೆಯ ಮೇಲೆ ಬೇಬಿರಾಣಿ ಫೋಟೋ ಅಂಟಿಸಿ ನಕಲಿ ಎಫ್​ಐಆರ್ ಸೃಷ್ಟಿಸಿದ್ದರು. ಇದನ್ನು ನೋಡಿದ ಕೃಷ್ಣದಾಸ್ ಎಫ್​ಐಆರ್ ಇರಬೇಕೆಂದು ಹೆದರಿ ಹಣ ಕೊಟ್ಟಿದ್ದರು. ಖಾಲಿ ಹಾಳೆಯಲ್ಲಿ ಬೆಂಗಳೂರು ನಗರ ಪೊಲೀಸರ ಲೋಗೋ ಅಂಟಿಸಿ ನಕಲಿ ದಾಖಲೆಯನ್ನೂ ಸೃಷ್ಟಿಸಿದ್ದರು.

ನಕಲಿ ಪೊಲೀಸರ ದಾಳಿ

ತಿಂಗಳ ಬಳಿಕ ಹಣ ವಾಪಾಸ್ ಕೊಡುವುದಾಗಿ ಹೇಳಿದ ಬೇಬಿರಾಣಿ, ಕೃಷ್ಣದಾಸ್​ರನ್ನು ಕೊಡಿಗೇಹಳ್ಳಿಗೆ ಕರೆಸಿಕೊಂಡಿದ್ದಳು. ಆಕೆಯ ಮನೆಗೆ ಕೃಷ್ಣದಾಸ್ ಹೋದಾಗ ಪಟೇಲ್ ಬಾಬು ಮತ್ತು ವೆಂಕಟೇಶ್ ಎಂಬುವವರು ಏಕಾಏಕಿ ಮನೆಗೆ ನುಗ್ಗಿ, ತಾವು ಕೊಡಿಗೇಹಳ್ಳಿ ಠಾಣೆಯ ಕ್ರೖೆಂ ಸಿಬ್ಬಂದಿ ಎಂದು ಹೇಳಿಕೊಂಡು, ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ನಮಗೆ ಮಾಹಿತಿ ಬಂದಿದೆ. ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ತಳ್ಳುತ್ತೇವೆ. ಕೇಸ್ ಬೇಡ ಎಂದರೆ 2.50 ಲಕ್ಷ ರೂ. ಕೊಡಬೇಕೆಂದು ಬ್ಲಾ್ಯಕ್​ವೆುೕಲ್ ಮಾಡಿದ್ದರು. ಭಯಭೀತರಾದ ಕೃಷ್ಣದಾಸ್, 50 ಸಾವಿರ ರೂ. ಕೊಟ್ಟಿದ್ದರು. ಇದಾದ ಬಳಿಕ ಬ್ಯಾಂಕ್​ನಿಂದ 2 ಲಕ್ಷ ರೂ. ಡ್ರಾ ಮಾಡಿ ನೀಡಿದ್ದರು. ಕೆಲ ದಿನಗಳ ಬಳಿಕ ಕೃಷ್ಣದಾಸ್ ಮೊಬೈಲ್​ಗೆ ಕರೆ ಮಾಡಿದ ಬೇಬಿರಾಣಿ, ‘ಮಗಳ ನೋಡಲು ವರನ ಕಡೆಯವರು ಬರುತ್ತಾರೆ. ಮಾತುಕತೆಗೆ ನೀವೂ ಬನ್ನಿ’ ಎಂದು ಕೃಷ್ಣದಾಸ್​ನನ್ನು ಕರೆಸಿಕೊಂಡಿದ್ದಳು. ಅದೇ ವೇಳೆ ಮತ್ತೆ ಪೊಲೀಸರ ಸೋಗಿನಲ್ಲಿ ನುಗ್ಗಿದ ಪಟೇಲ್ ಬಾಬು ಮತ್ತು ವೆಂಕಟೇಶ್, ನಿಮ್ಮ ಮೇಲೆ 2ನೇ ಬಾರಿ ದೂರು ಬಂದಿದೆ. 5 ಲಕ್ಷ ರೂ. ಕೊಡದಿದ್ದರೆ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿ ಹಣ ಸುಲಿಗೆ ಮಾಡಿದ್ದರು.