ರಾಯಚೂರು ಉತ್ಸವದಲ್ಲಿ ಮೈನವಿರೇಳಿಸಿದ ಜಗಜಟ್ಟಿಗಳ ಕುಸ್ತಿ ಕಾಳಗ

ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ವೀರೇಶ ನಾಯಕ ಗದೆನೀಡಿ ಗೌರವಿಸಿದರು. ಭಾರದ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪ್ರತಾಪ್‌ನ ಪ್ರತಾಪ. ಉಸುಕಿನಚೀಲ ಎತ್ತುವ ಸ್ಪರ್ಧೆಯಲ್ಲಿ ಜಗಜಟ್ಟಿಯ ಶಕ್ತಿ ಪ್ರದರ್ಶನ. ಮಹಿಳೆಯರ ಕುಸ್ತಿ ಕಾಳಗ. ಜಟ್ಟಿಗಳು ಪಟ್ಟು ಪ್ರದರ್ಶನ ಮಾಡಿದರು.
ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ವೀರೇಶ ನಾಯಕ ಗದೆನೀಡಿ ಗೌರವಿಸಿದರು. ಭಾರದ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪ್ರತಾಪ್‌ನ ಪ್ರತಾಪ. ಉಸುಕಿನಚೀಲ ಎತ್ತುವ ಸ್ಪರ್ಧೆಯಲ್ಲಿ ಜಗಜಟ್ಟಿಯ ಶಕ್ತಿ ಪ್ರದರ್ಶನ. ಮಹಿಳೆಯರ ಕುಸ್ತಿ ಕಾಳಗ. ಜಟ್ಟಿಗಳು ಪಟ್ಟು ಪ್ರದರ್ಶನ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗಮನ ಸೆಳೆದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ
  • ಬಾಲಕಿಯರಿಂದಲೂ ಶಕ್ತಿ ಪ್ರದರ್ಶನ
ದೇವದುರ್ಗ: ನಗರದ ಕೃಷಿ ವಿಜ್ಞಾನಗಳ ವಿವಿ ಆವರಣದಲ್ಲಿ ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಕಾಳಗ, ಸಂಗ್ರಾಣಿ ಕಲ್ಲು ಹಾಗೂ ಉಸುಕಿನ ಚೀಲ ಎತ್ತುವ ಸ್ಪರ್ಧೆ ನೋಡುಗರ ಮೈನವಿರೇಳಿಸುವಂತೆ ಮಾಡಿತು. ಬಾಲಕಿಯರು ನಾವೇನು ಕಡಿಮೆ ಇಲ್ಲ ಎನ್ನುವಂತೆ ಕುಸ್ತಿಯಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡರು.
ಸ್ಪರ್ಧೆಯಲ್ಲಿ ಜಿಲ್ಲೆ ಮಾತ್ರವಲ್ಲ ಅಕ್ಕಪಕ್ಕದ ಜಿಲ್ಲೆ, ತೆಲಂಗಾಣ, ಸೀಮಾಂಧ್ರದ ಸ್ಪರ್ಧಿಗಳು ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಿದರು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮೊದಲ ಹಂತ 95 ಕೆಜಿ, ಎರಡನೇ ಹಂತ 111ಕೆಜಿ, ಮೂರನೇ ಹಂತದಲ್ಲಿ 115ಕೆಜಿ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು.
ತೆಲಂಗಾಣದ ಮುಡುಮಲ್ ಗ್ರಾಮದ ರಾಮು 115 ಕೆಜಿ ಭಾರದ ಕಲ್ಲು ಒಂದೇ ಹಂತದಲ್ಲಿ ಎತ್ತಿ ಪ್ರಥಮ ಸ್ಥಾನ ಪಡೆದರು. ಪ್ರತಾಪ್ ನಾಯಕ ಎರಡನೇ ಹಂತದಲ್ಲಿ 115ಕೆಜಿ ಕಲ್ಲು ಎತ್ತಿ ದ್ವಿತೀಯ ಸ್ಥಾನಪಡೆದರು. ಇನ್ನು ಪ್ರಕಾಶ ಯಾದವ್, ಗೋವಿಂದ ಬಿಜನಗೇರಾ, ಅಸ್ಲಾಂ ಗಾಜರಾಳ, ವೆಂಕಟೇಶ ಇಬ್ರಾಹಿಂದೊಡ್ಡಿ, ಚನ್ನಮ್ಮ ಮಂಜರ್ಲಾ 111ಕೆಜಿ ಭಾರದ ಕಲ್ಲು ಎತ್ತುವ ಮೂಲಕ ಬಲ ಪ್ರದರ್ಶಿಸಿದರು. ಪಂದ್ಯಾವಳಿಯಲ್ಲಿ 100ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಮಹಿಳಾ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಶಿವಮೊಗ್ಗದ ಕಲ್ಪನಾ ಪ್ರಥಮ ಸ್ಥಾನ ಪಡೆದರೆ, ಶಿಕಾರಿಪುರದ ನಿಶ್ಚಿತ ದ್ವಿತೀಯ ಸ್ಥಾನ ಪಡೆದರು. ಪುರುಷರ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ಹೊಸಪೇಟೆ ಜಿಲ್ಲೆಯ ಮಾರುತಿ ಪ್ರಥಮ ಸ್ಥಾನ ಪಡೆದರೆ, ಹಗರಿಬೊಮ್ಮನಹಳ್ಳಿಯ ಇರ್ಫಾನ್ ದ್ವಿತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ದಾವಣಗೆರೆ, ಬಳ್ಳಾರಿ, ಬೆಂಗಳೂರು, ಅಸ್ಸಾಂ, ಮಹಾರಾಷ್ಟ್ರ, ತೆಲಂಗಾಣ ಸೇರಿ ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಭಾಗವಹಿಸಿದ್ದರು.

ಚಪ್ಪಾಳೆ, ಶಿಳ್ಳೆಯ ಜೈಕಾರ

ಕುಸ್ತಿ, ಸಂಗ್ರಾಣಿ ಕಲ್ಲು ಹಾಗೂ ಉಸುಕಿನಚೀಲ ಎತ್ತುವ ಸ್ಪರ್ಧೆ ಅತ್ಯಂತ ರೋಚಕದಿಂದ ಕೂಡಿತ್ತು. ನೆರೆದಿದ್ದ ಸಾವಿರಾರು ಜನರು ಶಿಳ್ಳೆ, ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಸಂಭ್ರಮಿಸಿದರು. ಜಟ್ಟಿಗಳು ಭಾರವಾದ ಕಲ್ಲು, ಉಸುಕಿನ ಚೀಲ ಎತ್ತುವಾಗ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಕುಸ್ತಿಯಲ್ಲಿ ಪಟ್ಟು ಸಡಿಲಿಸದ ಸ್ಪರ್ಧೆಯ ಕಂಡು ಶಿಳ್ಳೆಹಾಕಿದರು.
ಜನರು ಬಿಸಿಲಿನ ತಾಪ ಲೆಕ್ಕಿಸದೆ ಭಾಗವಹಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದರು. ಆಜಾನುಬಾಹು ಕುಸ್ತಿಪಟುಗಳ ಶಕ್ತಿ ಪ್ರದರ್ಶನ ಅಖಾಡ ರಂಗೇರಿಸಿತ್ತು. ಇದಕ್ಕೂ ಮುನ್ನ ಸ್ಪರ್ಧೆಗೆ ಸಚಿವ ಎನ್.ಎಸ್.ಬೋಸರಾಜು ಚಾಲನೆ ನೀಡಿ ಕೆಲಕಾಲ ವೀಕ್ಷಣೆ ಮಾಡಿದರು.
"

ಗ್ರಾಮೀಣ ಭಾಗದ ಕ್ರೀಡೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಗ್ರಾಣಿ ಕಲ್ಲು, ಉಸುಕಿನ ಚೀಲ ಹಾಗೂ ಕುಸ್ತಿ ಪಂದ್ಯಾವಳಿ ಹಮ್ಮಿಕೊಂಡಿದ್ದು, ಅಭೂತಪೂರ್ವ ಬೆಂಬಲ ಸಿಕ್ಕಿದೆ. 200ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಹೊರಜಿಲ್ಲೆ ಮಾತ್ರವಲ್ಲ ಬೇರೆಬೇರೆ ರಾಜ್ಯದ ರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಭಾಗವಹಿಸಿದ್ದರು.

ಆರು ಬಲಿಷ್ಠರಿಗೆ ಬಿರುದು

ಕುಸ್ತಿ ಪಂದ್ಯಾವಳಿಯ ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಬಿರುದು ನೀಡಿ ಗೌರವಿಸಲಾಯಿತು. ಪ್ರಥಮ ಸ್ಥಾನ ಪಡೆದ ಬಸವರಾಜ ಪಾಟೀಲ್‌ಗೆ ಎಡೆದೊರೆ ಕಂಠೀರವ ಪ್ರಶಸ್ತಿ, ಹನುಮಂತ ಮರಿಯಮ್ಮನಹಳ್ಳಿಗೆ ಎಡೆದೊರೆ ಕೇಸರಿ, ಯೋಗೇಶಗೆ ಎಡೆದೊರೆ ಕಿಶೋರ, ಮಾರುತಿಗೆ ಎಡೆದೊರೆ ಕುಮಾರ ಬಿರುದು ನೀಡಲಾಯಿತು.
ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಜಲಜಾಕ್ಷಿ ಎಸ್.ಗೆ ಎಡೆದೊರೆ ಕಿಶೋರಿ, ಸತ್ಯಶ್ರೀಗೆ ಎಡೆದೊರೆ ಕುಮಾರಿ ಬಿರುದು ನೀಡಲಾಯಿತು. ವಿಜೇತರಿಗೆ ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ವೀರೇಶ ನಾಯಕ ಗದೆನೀಡಿ ಗೌರವಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net