ರಾಯಚೂರು ಉತ್ಸವ; ಸ್ವಚ್ಛತಾ ವಾಹನಗಳಿಗೆ ಪೊಲೀಸರ ತಡೆ, ಸಿಬ್ಬಂದಿ ಆಕ್ರೋಶ

ರಾಯಚೂರು ಉತ್ಸವ
ರಾಯಚೂರು ಉತ್ಸವ
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸರ ಕಟ್ಟುನಿಟ್ಟಿನ ಕ್ರಮ
  • ಪೌರ ಕಾರ್ಮಿಕರು ಪ್ರತಿಭಟನೆ
ರಾಯಚೂರು: ಉತ್ಸವದ ಮುಖ್ಯವೇದಿಕೆ ಸ್ವಚ್ಛತೆಗೆ ತೆರಳಿದ ಮಹಾನಗರ ಪಾಲಿಕೆಯ ಸಿಬ್ಬಂದಿಯನ್ನು ಪೊಲೀಸರು ಮುಖ್ಯದ್ವಾರದಲ್ಲಿ ತಡೆದ ಕಾರಣದಿಂದ ಪೌರ ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೂರು ದಿನಗಳ ಉತ್ಸವ ನಿಮಿತ್ತ ಬಂದೋಬಸ್ತ್‌ಗೆ ನಿಯುಕ್ತಿಗೊಂಡಿರುವ ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ವಾಹನ ನಿಲುಗಡೆಯಿಂದ ಹಿಡಿದು ಉತ್ಸವದ ಪ್ರವೇಶದವರೆಗೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಉತ್ಸವದ ಸ್ವಚ್ಛತೆಗೆ ಶ್ರಮಿಸಿದ ಪಾಲಿಕೆಯ ಪೌರ ಕಾರ್ಮಿಕರು,
ವಾಹನಗಳೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ತೆರಳುವಾಗ ಪೊಲೀಸರು ಅಡ್ಡಿಪಡಿಸಿದ್ದಾರೆ. ಉತ್ಸವದ ಕಸ ವಿಲೇವಾರಿಗೆ ಆಗಮಿಸಿದ ವಾಹನಗಳನ್ನು ಕೃಷಿ ವಿಶ್ವವಿದ್ಯಾಲಯದ ದ್ವಾರದ ಬಳಿ ತಡೆದ ಪೊಲೀಸರ ನಡೆ ವಿರೋಧಿಸಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಎರಡನೇ ದಿನದ ಕಾರ್ಯಕ್ರಮದಲ್ಲಿ ಕೃಷಿ ಮೇಳ ಹೊರತುಪಡಿಸಿದರೆ ಯಾವೊಬ್ಬ ವಿಐಪಿಗಳು, ಸಚಿವರು ಅಥವಾ ಶಾಸಕರ ಕಾರ್ಯಕ್ರಮಗಳಿಲ್ಲ. ಆದರೂ ಪೊಲೀಸರು ಅನಗತ್ಯವಾಗಿ ಪ್ರವೇಶಕ್ಕೆ ಅಡ್ಡಿಪಡಿಸುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕಸದ ವಾಹನಗಳೊಂದಿಗೆ ಸಿಬ್ಬಂದಿ ಮುಖ್ಯದ್ವಾರದಲ್ಲಿ ಕಾಯುವಂತಾಯಿತು.
ಪಾಲಿಕೆಯ ಹಿರಿಯ ಅಧಿಕಾರಿಗಳು ಸಹ ಸಿಬ್ಬಂದಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನ ಮಾಡದ ಕಾರಣ, ಕಸ ವಿಲೇವಾರಿ ಸಮಸ್ಯೆ ಸೃಷ್ಟಿಗೆ ಪೊಲೀಸರೇ ನೇರ ಕಾರಣವಾಗುವಂತಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net