ವಿಜಯವಾಣಿ ಸುದ್ದಿಜಾಲ ತುಮಕೂರು
ದೇಶದಲ್ಲಿರುವ ಜಾತಿ ಪದ್ಧತಿ ನೋಡಿದಾಗ ಮೇಲು ಮತ್ತು ಕೆಳ ಜಾತಿಗಳ ಸಂಬಂಧಗಳು ಅಸಮನಾಗಿವೆ. ಇದು ಚಾರಿತ್ರಿಕವಾದ ತಪ್ಪು. ಈ ತಪ್ಪನ್ನು ನಾವು ತಿದ್ದಿಕೊಳ್ಳಬೇಕು ಎಂದು ನಾಟಕಕಾರ ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಬಿಜಿಎಸ್ ವೃತ್ತದಲ್ಲಿರುವ ಐಎಂಎ ಸಭಾಂಗಣದಲ್ಲಿ ಭಾನುವಾರ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಅನುವಾದಿಸಿರುವ “ಆ ಲಯ, ಈ ಲಯ’ ನಾಟಕ ಕೃತಿ ಬಿಡುಗಡೆ ಮಾಡಿ ಮಾತನಾಡಿ, ದೇಶದಲ್ಲಿ ಜಾತಿ ಪದ್ಧತಿ ಕಾನೂನು ಪ್ರಕಾರ ನಿಷೇಧವಾಗಿದೆ. ಆದರೆ, ಪ್ರತಿತಿಯಲ್ಲಿದೆ. ಜಾತಿ ಪದ್ಧತಿಯ ಭೌತಿಕ ಬದಲಾವಣೆಗಿಂತ ಮಾನಸಿಕ ಬದಲಾವಣೆ ಮುಖ್ಯ. ಇದು ಸಾಹಿತ್ಯದ, ಸೃಜನಶೀಲತೆಯ ರಂಗಭೂಮಿಯ ಪ್ರಮುಖ ಕರ್ತವ್ಯ. ಇದು ಗೊತ್ತಿಲ್ಲದವರು ಏನೇನೋ ಹೇಳಿಕೆ ಕೊಡುತ್ತಿರುತ್ತಾರೆ ಎಂದು ಟೀಕಿಸಿದರು.
ಹಿಂದೆ ಜನಾಂಗವಾದದ ವಿರುದ್ಧ ಹೋರಾಟ ಮಾಡಿದವರೆಲ್ಲ ಈಗ ಶೋಷಕ ವರ್ಗಕ್ಕೆ ಸೇರಿದ್ದಾರೆ. ಈ ಪರಿಸ್ಥಿತಿ ಚಲನಶೀಲವಾಗಿದೆ. ಈ ಚಲನಶೀಲತೆಯಲ್ಲಿ ಆದರ್ಶವಾದಿ ಯುವಕರು, ಯುವತಿಯರು ಯಾವ ರೀತಿ ತ್ಯಾಗ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಶೋಷಕ ಮತ್ತು ಶೋಷಿತರ ನಡುವೆ ಇರುವ ಅಡ್ಡಗೆರೆ ಈಗ ಬಿಳಿಯರು, ಕರಿಯರು ಎಂದು ಹೇಳಲು ಆಗದಂತಹ ಪರಿಸ್ಥಿತಿ ನಿಮಾರ್ಣವಾಗಿದೆ ಎಂದ ಕಳವಳ ವ್ಯಕ್ತಪಡಿಸಿದರು.
ಆ ಲಯ, ಈ ಲಯ ಅನುವಾದ ನಾಟಕ ಕೃತಿ ಚನ್ನಾಗಿ ಮೂಡಿ ಬಂದಿದೆ. ಈ ನಾಟಕದ ಪಾತ್ರಗಳನ್ನು ಭಾರತ ಪಾತ್ರಗಳನ್ನಾಗಿ ಬದಲಾಯಿಸಿದರೆ ಇದು ಭಾರತದ್ದೇ ಎನ್ನುವಷ್ಟರ ಮಟ್ಟಿಗೆ ಅನುವಾದಿಸಲಾಗಿದೆ ಎಂದರು.
ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರಾಜ, ಪಾಳೇಗಾರ, ಅವರ ಪತ್ನಿಯರು ನಡುವೆ ಕಾಮ, ಪ್ರೇಮ ಮತ್ತು ಕ್ರೋಧವೇ ಗಿರಿಕಿ ಹೊಡೆಯುತ್ತಿದೆ. ಕಾಳಿದಾಸನನ್ನು ಒಬ್ಬ ಶೃಂಗಾರ ಕವಿ ಎಂದು ಬಂಧಿಸಲ್ಪಟ್ಟಿದ್ದೇವೆ. ಸುಖೀರಾಜ್ಯದಲ್ಲಿ ಕವಿಗಳು ಆರಾಮವಾಗಿರಬಹುದು. ಆದರೆ ದುಖದ ಸನ್ನಿವೇಶದಲ್ಲಿ ಕವಿಗಳು ಸುಮ್ಮನೆ ಕೂರುವಂತಿಲ್ಲ. ಅದಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು. ನಮ್ಮಲ್ಲಿ ಎರಡು ಮಾರ್ಗಗಳಿವೆ. ಒಂದು ಅಂಬೇಡ್ಕರ್ ಮಾರ್ಗ, ಮತ್ತೊಂದು ಗಾಂಧಿ ಮಾರ್ಗ. ಈ ಮಾರ್ಗಗಳನ್ನು ಮುಖಾಮುಖಿಯಾಗಿಸಿ ಪರಸ್ಪರ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದು ರಾಜಕಾರಣದ ಬಿಕ್ಕಟ್ಟು. ಸಂಸತ್ತಿನಲ್ಲಿ ಇದೇ ಚರ್ಚೆಯಾಗುತ್ತಿದೆ. ನಮಗೆ ಗೊತ್ತಿಲ್ಲದೆ ಪುರೋಹಿತಶಾಹಿಯ ಪಾಳೇಗಾರಿಕೆ ಪದ್ಧತಿಯ ಸೆಂಗೋಲ್ ಅನ್ನು ಸಂಸತ್ತಿನಲ್ಲಿ ಇಡಲಾಗಿದೆ ಎಂದರು.
ನಮಗೆ ಗೊತ್ತಿಲ್ಲದೆ ನಾವು ಪ್ರಜಾಪ್ರಭುತ್ವದ ವಿರೋಧಿಗಳಾಗಿರುತ್ತೇವೆ. ಊಳಿಗಮಾನ್ಯ ಪದ್ಧತಿಯ ಆರಾಧಕರಾಗಿರುತ್ತೇವೆ. ರಾಜಶಾಹಿಯ ಪಕ್ಷಪಾತಿಗಳಾಗಿರುತ್ತೇವೆ. ಇದನ್ನು ಆಫ್ರಿಕಾದ ಸಾಹಿತ್ಯ ಪ್ರಶ್ನೆ ಮಾಡುತ್ತಾ ಹೋಯಿತು. ನ್ಯಾಯಾಲಯದಲ್ಲಿ ಸತ್ಯ ಮೇವ ಜಯತೇ ಅಂತ ಬರೆದಿರುತ್ತಾರೆ. ಅಲ್ಲಿ ಸಾಕ್ಷಿಮೇವ ಜಯತೇ ಇರಬೇಕಿತ್ತು. ಸಾಕ್ಷಿ ಇದ್ದರೆ ಮಾತ್ರ ಅಲ್ಲಿ ನ್ಯಾಯ ಸಿಗೋದು ಎಂದು ಅಭಿಪ್ರಾಯಪಟ್ಟರು. ತುಮಕೂರು ವಿವಿ ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ, ರಂಗನಿರ್ದೇಶಕಿ ಎಚ್.ಕೆ.ಶ್ವೇತಾರಾಣಿ, ವೈದ್ಯ ಡಾ.ಬಸವರಾಜು ಮಾತನಾಡಿದರು. ಗಂಗಲಕ್ಷಿ$್ಮ, ತರಂಗಿಣಿ, ನಟರಾಜ ಹೊನ್ನವಳ್ಳಿ ಇದ್ದರು.