More

    ಸಮಾಜದ ಸುಗಮ ನಿರ್ವಹಣೆಗೆ ವರ್ಣ ವ್ಯವಸ್ಥೆ

    ಸಮಾಜದ ಸುಗಮ ನಿರ್ವಹಣೆಗೆ ವರ್ಣ ವ್ಯವಸ್ಥೆಮಾನವನು ನೂರು ವರ್ಷಗಳ ಪರಿಪೂರ್ಣ ಸಾರ್ಥಕ ಜೀವನ ನಡೆಸಲು ದಾರಿ ತೋರಿಸುವ ಚತುರಾಶ್ರಮ ಧರ್ಮದ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಪ್ರಥಮ ಹಂತವಾದ ಬ್ರಹ್ಮಚರ್ಯಾಶ್ರಮದಲ್ಲಿ ಜೀವನದ ಮೊದಲ ಇಪ್ಪತ್ತೈದು ವರ್ಷಗಳು ವಿದ್ಯಾರ್ಜನೆಗೆ ಮೀಸಲು; ಮೊದಲ ಎಂಟು ವರ್ಷಗಳಲ್ಲಿ ಸ್ವಗೃಹದಲ್ಲಿ ತಂದೆ-ತಾಯಿಗಳ ಲಾಲನೆ-ಪೋಷಣೆ-ಮಾರ್ಗದರ್ಶನಗಳಲ್ಲಿ ಬೆಳೆದನಂತರ ಹನ್ನೆರಡರಿಂದ ಹದಿನೇಳು ವರ್ಷಗಳ ಗುರುಕುಲವಾಸ. ನಂತರದ ಹಂತವಾದ ಗೃಹಸ್ಥಾಶ್ರಮದಲ್ಲಿ ವ್ಯಕ್ತಿಯು ವಿವಾಹವಾಗಿ ಅರ್ಥ-ಕಾಮಗಳನ್ನು ಧರ್ಮದ ಚೌಕಟ್ಟಿನಲ್ಲಿ ಸಾಧಿಸುತ್ತಾನೆ. ತೃತೀಯ ಹಂತವಾದ ವಾನಪ್ರಸ್ಥಾಶ್ರಮದಲ್ಲಿ ಲೌಕಿಕ ಸುಖ-ಭೋಗಗಳನ್ನು ತ್ಯಜಿಸಿ ಸದ್ಗುರುವಿನ ಆಶ್ರಯ-ಮಾರ್ಗದರ್ಶನಗಳಲ್ಲಿ ಆಧ್ಯಾತ್ಮಿಕ ಸಾಧನೆ ಹಾಗೂ ಸಮಾಜಸೇವೆ. ಜೀವನದ ಅಂತಿಮ ಹಂತವಾದ ಸಂನ್ಯಾಸಾಶ್ರಮದಲ್ಲಿ ಆತ್ಮಸಾಕ್ಷಾತ್ಕಾರ ಸಾಧಿಸಿ ಆತ್ಮಾನಂದದಲ್ಲಿ ತಲ್ಲೀನನಾಗಿ ದೇಹತ್ಯಾಗ ಮಾಡಲು ಸಿದ್ಧತೆ. ಹೀಗೆ ಸನಾತನ ಧರ್ಮವು ಪ್ರತಿ ಮಾನವನೂ ಈ ಆಶ್ರಮಧರ್ಮವನ್ನು ಪಾಲಿಸುವುದರ ಮೂಲಕ ಜೀವನದಲ್ಲಿ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ ಹೇಗೆ ಜನನ-ಮರಣ ಚಕ್ರದಿಂದ ಮುಕ್ತಿ ಪಡೆಯಬಹುದೆಂಬುದನ್ನು ತೋರಿಸಿಕೊಟ್ಟಿದೆ. ಹಾಗೆಯೇ ಯೋಗ್ಯನಾದ ಒಬ್ಬ ವ್ಯಕ್ತಿಯು ಸ್ವಯಮಿಚ್ಛೆಯ ಮೇರೆಗೆ ಬ್ರಹ್ಮಚರ್ಯಾಶ್ರಮದಿಂದ ನೇರವಾಗಿ ಸಂನ್ಯಾಸಾಶ್ರಮಕ್ಕೆ ಹೋಗುವ ನಿರ್ಣಯ ಮಾಡಿದರೆ, ಅದನ್ನೂ ಸನಾತನ ಧರ್ಮವು ಪುರಸ್ಕರಿಸುತ್ತದೆ. ಮಾನವನು ಸಾರ್ಥಕ ಜೀವನ ನಡೆಸಲು ಇದಕ್ಕಿಂತಲೂ ಉತ್ತಮ, ರ್ತಾಕ ಹಾಗೂ ಆಚರಣಾ ಸಾಧ್ಯವಾದ ಜೀವನ ವಿಧಾನ ಪ್ರಪಂಚದಲ್ಲಿ ಬೇರೆಲ್ಲಾದರೂ ಇದೆಯೇ?

    ವ್ಯಕ್ತಿಗೆ ಅತ್ಯುತ್ತಮ ಜೀವನ ವಿಧಾನವನ್ನು ತೋರಿರುವ ಸನಾತನ ಧರ್ಮವು ಅತಿ ಶ್ರೇಷ್ಠ, ರ್ತಾಕ ಹಾಗೂ ವ್ಯವಹಾರ್ಯವಾದ ಸಾಮಾಜಿಕ ವ್ಯವಸ್ಥೆಯನ್ನೂ ಜಗತ್ತಿಗೆ ನೀಡಿದೆ. ಅದುವೇ ಕರ್ತವ್ಯಾಧಾರಿತ ಚತುರ್ವಿಧ ವರ್ಣಧರ್ಮ. ಹೆಚ್ಚಿನ ಜನರಲ್ಲಿ ಸನಾತನ ಧರ್ಮದ ಪವಿತ್ರ ಹಾಗೂ ಲೋಕಕಲ್ಯಾಣಕಾರೀ ಸಿದ್ಧಾಂತಗಳ ಬಗ್ಗೆ ಹೆಚ್ಚಿನ ಅರಿವಿಲ್ಲದಿರುವ ಇಂದಿನ ಕಾಲದಲ್ಲಿ ಈ ವರ್ಣಧರ್ಮವು ಅತಿ ಸೂಕ್ಷ್ಮ ಸಂವೇದನಾಶೀಲ ವಿಷಯವಾಗಿರುವುದು ಮಾತ್ರವಲ್ಲದೆ, ಬಹಳ ತಪ್ಪು ಗ್ರಹಿಕೆಗಳ ಗೊಂದಲದ ಗೂಡಾಗಿದೆ! ಆದ್ದರಿಂದಲೇ ವರ್ಣವ್ಯವಸ್ಥೆಯನ್ನು ಸನಾತನ ಧರ್ಮದ ಮಹಾನ್ ಆಧ್ಯಾತ್ಮಿಕ ಪ್ರಕಾಶದ ಹಿನ್ನೆಲೆಯಲ್ಲಿ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ವ್ಯಕ್ತಿಯು ಸಮಾಜದ ಮೂಲಘಟಕ; ಸಮಾಜದಲ್ಲಿರುವ ವ್ಯಕ್ತಿಗಳನ್ನು ಅವರ ಸಹಜ ಒಲವು, ಗುಣ ಹಾಗೂ ಪ್ರವೃತ್ತಿಗಳಿಗನುಸಾರವಾಗಿ ಅವರು ತಮಗೆ ಸರಿಹೊಂದುವ ಕರ್ಮ-ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವಂತೆ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಆಳವಾಗಿ ಯೋಚಿಸಿದಾಗ ಪ್ರತಿ ಮಾನವ ಸಮಾಜದಲ್ಲಿಯೂ ಈ ಕರ್ತವ್ಯಾಧಾರಿತ ವರ್ಗಗಳಿರುವುದನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಅವುಗಳೆಂದರೆ, ಬೌದ್ಧಿಕ ವರ್ಗ (Intellectual class), ಆಡಳಿತ ಹಾಗೂ ರಕ್ಷಣಾ ವರ್ಗ (Ruling/Martial class), ವ್ಯಾಪಾರೀ ವರ್ಗ (Commercial class), ಮತ್ತು ಶ್ರಮಿಕ ವರ್ಗ (Labour class). ವರ್ಣ ವ್ಯವಸ್ಥೆಯಲ್ಲಿ, ಬ್ರಾಹ್ಮಣರು ಬೌದ್ಧಿಕ-ಆಧ್ಯಾತ್ಮಿಕ ವರ್ಗವಾದರೆ, ಕ್ಷತ್ರಿಯರು ಆಡಳಿತ ಹಾಗೂ ರಕ್ಷಣಾ ವರ್ಗ, ವೈಶ್ಯರು ವ್ಯಾಪಾರೀ ವರ್ಗ ಮತ್ತು ಶೂದ್ರರು ಶ್ರಮಿಕ ವರ್ಗವಾಗಿರುತ್ತಾರೆ.

    ಬ್ರಾಹ್ಮಣರ ಕರ್ತವ್ಯವೆಂದರೆ, ಲೌಕಿಕ-ಆಧ್ಯಾತ್ಮಿಕ ಜ್ಞಾನದ ಭಂಡಾರವಾಗಿರುವ ವೇದ ಇತ್ಯಾದಿ ಶಾಸ್ತ್ರಗಳನ್ನು ಕಲಿತು ಸಮಾಜಕ್ಕೆ ಜ್ಞಾನಬೋಧನೆ ಮಾಡುವುದು; ತನ್ಮುಖಾಂತರ ಅವರು ಜ್ಞಾನಸಂಪತ್ತು ಸದಾಕಾಲ ಸಮಾಜದಲ್ಲಿ ಉಳಿಯುವಂತೆ ರಕ್ಷಿಸುತ್ತಾರೆ. ಕ್ಷತ್ರಿಯರು ಸಮಾಜವನ್ನು ಧರ್ಮಬದ್ಧವಾಗಿ ಆಳುತ್ತಾ, ತಮ್ಮ ಭೌತಿಕ ಶಕ್ತಿಯಿಂದ ಅದನ್ನು ರಕ್ಷಿಸಿ ಪೋಷಿಸುತ್ತಾರೆ. ವೈಶ್ಯರೆಂದರೆ ವ್ಯಾಪಾರಿಗಳು ಹಾಗೂ ಉದ್ಯಮಿಗಳು; ಸಮಾಜದಲ್ಲಿ ಸಂಪತ್ತಿನ ಉತ್ಪಾದನೆ-ವರ್ಧನೆಗಳನ್ನು ಮಾಡಿ ಅದನ್ನು ಎಲ್ಲರಿಗೂ ಸಮಾನವಾಗಿ ವಿತರಣೆ ಮಾಡುವುದು ಇವರ ಕರ್ತವ್ಯವಾಗಿರುತ್ತದೆ. ಶೂದ್ರರೆಂದರೆ ಕುಶಲಕರ್ವಿುಗಳು ಹಾಗೂ ಕಾರ್ವಿುಕರು; ಸಮಾಜಕ್ಕೆ ಎಲ್ಲಾ ರೀತಿಯ ಸೇವೆಗಳನ್ನು ಒದಗಿಸುವುದು ಇವರ ಕರ್ತವ್ಯ.

    ಈ ಕರ್ತವ್ಯಾಧಾರಿತ ಸಮಾಜ ವರ್ಗೀಕರಣದ ಆವಿರ್ಭಾವದ ಕುರಿತಾಗಿ ಅನೇಕ ಸಿದ್ಧಾಂತಗಳ ಜೊತೆಗೆ ಹಲವು ಊಹಾಪೋಹಗಳೂ ಇವೆ. ಈ ವರ್ಗೀಕರಣದ ದಿವ್ಯಮೂಲವನ್ನು ನಾವು ಋಗ್ವೇದದ ಹತ್ತನೆಯ ಅಧ್ಯಾಯದ ತೊಂಬತ್ತನೆಯ ಭಾಗದಲ್ಲಿ ಬರುವ ಪುರುಷ ಸೂಕ್ತದಲ್ಲಿ ಕಾಣಬಹುದು. ಪುರುಷ ಸೂಕ್ತದಲ್ಲಿ ಸೃಷ್ಟಿಯು ಹೇಗೆ ಆದಿಯಲ್ಲಿ ‘ಪುರುಷ’ನಿಂದ ಆವಿರ್ಭವಿಸಿತೆಂಬುದನ್ನು ವಿವರಿಸಲಾಗಿದೆ. ಸಾಮಾನ್ಯವಾಗಿ ಜನರು ಪುರುಷನೆಂದರೆ ಆದಿಮಾನವನೆಂಬ ಅರ್ಥ ಕೊಟ್ಟು, ಅದನ್ನು ಪುಲ್ಲಿಂಗಾತ್ಮಕವೆಂದು ತಪ್ಪಾಗಿ ತಿಳಿಯುತ್ತಾರೆ. ಸಂಸ್ಕೃತ ಭಾಷೆೆಯಲ್ಲಿ ‘ಪುರುಷ’ ಎಂಬ ಪದವು, ‘ಪುರು’ ಹಾಗೂ ‘ಷ’ ಎಂಬ ಎರಡು ಪದಗಳ ಜೋಡಣೆಯಾಗಿರುತ್ತದೆ. ‘ಪುರ’ ಎಂದರೆ ಒಂದು ಸ್ಥಳ ಅಥವಾ ಭವನ; ‘ಷ’ ಎಂದರೆ ವಾಸಿಸುವನು ಎಂದರ್ಥ. ‘ಪುರುಷ’ನೆಂದರೆ ಪರಮಾತ್ಮ ಅಥವಾ ಬ್ರಹ್ಮನ ವಾಸಸ್ಥಳವೆಂಬುದು ಸರಿಯಾದ ಅರ್ಥ. ಹೀಗೆ ನೋಡಿದಾಗ ಆದಿಪುರುಷನು ಬ್ರಹ್ಮನ ಪ್ರಥಮ ಅಭಿವ್ಯಕ್ತರೂಪವೇ. ಬ್ರಹ್ಮನು ‘ಅವನೂ’ ಅಲ್ಲ, ‘ಅವಳೂ’ ಅಲ್ಲ ಅಥವಾ ‘ಅದೂ’ ಅಲ್ಲವೆಂಬುದನ್ನು ನಾವು ಇದೇ ಅಂಕಣದ ಹಿಂದಿನ ಲೇಖನಗಳಿಂದ ತಿಳಿದುಕೊಂಡಿದ್ದೇವಷ್ಟೇ!

    ಪುರುಷ ಸೂಕ್ತವು ಚತುರ್ವರ್ಣ ವ್ಯವಸ್ಥೆಯ ಸಾಮಾಜಿಕ ವರ್ಗೀಕರಣದ ಬಗ್ಗೆ ಏನು ಹೇಳುತ್ತದೆ? ಬ್ರಾಹ್ಮಣರು ಪುರುಷನ ಮುಖ ಅಥವಾ ಶಿರದಿಂದ ಉದ್ಭವವಾಗಿದ್ದಾರೆ; ಶಿರವು ಬೌದ್ಧಿಕವರ್ಗದ ಸಂಕೇತ. ಕ್ಷತ್ರಿಯರು ಪುರುಷನ ಭುಜಭಾಗದಿಂದ ಉದ್ಭವವಾಗಿದ್ದಾರೆ; ಭುಜಗಳು ಆಡಳಿತ ಹಾಗೂ ರಕ್ಷಣಾ ವ್ಯವಸ್ಥೆಯಲ್ಲಿ ಇರಬೇಕಾದ ಶಕ್ತಿ-ಪರಾಕ್ರಮಗಳನ್ನು ಸೂಚಿಸುತ್ತವೆ. ವೈಶ್ಯರ ಉಗಮಸ್ಥಾನ ಪುರುಷನ ದೇಹದ ಮಧ್ಯಭಾಗ, ಎಂದರೆ ಉದರ ಹಾಗೂ ತೊಡೆಗಳು. ದೇಹದಲ್ಲಿ ಉದರವು ಆಹಾರದಿಂದ ತುಷ್ಟಿ-ಪುಷ್ಟಿಗಳನ್ನು ಉತ್ಪಾದಿಸಿ, ದೇಹದ ಎಲ್ಲಾ ಭಾಗಗಳಿಗೂ ಒದಗಿಸುವ ರೀತಿಯಲ್ಲಿ ವೈಶ್ಯರು ಸಾಮಾಜಿಕ ಸಂಪತ್ತನ್ನು ಉತ್ಪಾದಿಸಿ ಎಲ್ಲರಿಗೂ ವಿತರಣೆ ಮಾಡುತ್ತಾರೆ. ಶೂದ್ರರ ಉದ್ಭವ ಸ್ಥಾನ ಪುರುಷನ ಪಾದಗಳು; ಹೇಗೆ ಪಾದಗಳು ದೇಹಕ್ಕೆ ಆಧಾರವಾಗಿ ಚಲಿಸಲು ಸಹಾಯ ಮಾಡುತ್ತವೆಯೋ ಅದೇ ರೀತಿಯಲ್ಲಿ ಶೂದ್ರರು ಸಮಾಜ ನಿರ್ವಹಣೆಗೆ ಬೇಕಾದ ಎಲ್ಲಾ ಸೇವೆಗಳಿಗೆ ಆಧಾರವಾಗಿ ಸಮಾಜದ ಪ್ರಗತಿಗೆ ಸಹಾಯಕವಾಗುತ್ತಾರೆ.

    ಈ ಮೇಲಿನ ಪುರುಷ ಹಾಗೂ ಸಾಮಾಜಿಕ ವರ್ಗೀಕರಣದ ಸಾಂಕೇತಿಕತೆಯ ಅರ್ಥವನ್ನು ಇನ್ನೂ ಆಳವಾಗಿ ತಿಳಿದುಕೊಳ್ಳೋಣ. ಸಮಾಜದಲ್ಲಿ ಬ್ರಾಹ್ಮಣರು ಬುದ್ಧಿಜೀವಿಗಳು; ಬುದ್ಧಿಯಿಂದ ಮಾನವರು ಜ್ಞಾನ ಸಂಪಾದನೆ ಮಾಡಿ ಇತರರಿಗೆ ಅದನ್ನು ಬೋಧಿಸುತ್ತಾರೆ ಹಾಗೂ ಬುದ್ಧಿಶಕ್ತಿಯ ವಿವೇಚನೆಯಿಂದ ನಿತ್ಯಾನಿತ್ಯವಸ್ತುವಿವೇಕವನ್ನು ಗಳಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಪಡೆಯುತ್ತಾರೆ. ಜ್ಞಾನವೆಂದರೆ ಲೌಕಿಕ ಹಾಗೂ ಆಧ್ಯಾತ್ಮಿಕ ತಿಳುವಳಿಕೆಗಳೆರಡನ್ನೂ ಹೊಂದಿರಬೇಕು. ಇಂತಹ ಜ್ಞಾನದ ಸಂಪಾದನೆ ಮತ್ತು ಬೋಧನೆಗಳು ಬ್ರಾಹ್ಮಣರ ಕರ್ತವ್ಯ. ಭುಜ ಹಾಗೂ ಬಾಹುಬಲದಿಂದ ಇಡೀ ದೇಹದ ನಿರ್ವಹಣೆ ಹಾಗೂ ರಕ್ಷಣೆಯಾಗುವ ರೀತಿಯಲ್ಲಿ ಕ್ಷತ್ರಿಯರಿಂದ ಸಮಾಜದ ಆಡಳಿತ ಹಾಗೂ ರಕ್ಷಣೆಗಳಾಗುತ್ತವೆ. ಮನುಷ್ಯನಲ್ಲಿ ಆಹಾರವು ಬಾಹುಗಳಿಂದ ಮುಖದ ಮೂಲಕ ಉದರವನ್ನು ಸೇರುತ್ತದೆ; ಇದನ್ನು ಉದರವು ಜೀರ್ಣಿಸಿ ಅದರಿಂದ ಬಂದ ತುಷ್ಟಿ-ಪುಷ್ಟಿಗಳನ್ನು ದೇಹದ ಎಲ್ಲಾ ಭಾಗಗಳಿಗೂ ತಲುಪಿಸುತ್ತದೆ. ಇದೇ ರೀತಿಯಲ್ಲಿ ವೈಶ್ಯರು ಸಮಾಜದಲ್ಲಿ ವಾಣಿಜ್ಯೋದ್ಯಮಿಗಳಾಗಿದ್ದು ಅಗತ್ಯ ವಸ್ತುಗಳನ್ನು ಉತ್ಪಾದಿಸಿ, ಸಂಪತ್ತನ್ನು ಸಂಚಯಿಸಿ ಎಲ್ಲರಿಗೂ ವಿತರಿಸುತ್ತಾರೆ. ಪುರುಷನ ಪಾದಗಳಿಂದ ಉದ್ಭವಿಸಿದ ಶೂದ್ರರು ಸಮಾಜಕ್ಕೆ ಅಗತ್ಯವಾದ ಎಲ್ಲಾ ರೀತಿಯ ಸೇವೆಗಳನ್ನು ಒದಗಿಸಿ ಸಮಾಜದ ಮುನ್ನಡೆಗೆ ಸಹಾಯ ಮಾಡುತ್ತಾರೆ. ಮಾನವ ದೇಹದ ಯೋಗಕ್ಷೇಮಕ್ಕಾಗಿ ಪ್ರತಿಯೊಂದು ಅಂಗವೂ ಅಮೂಲ್ಯವಾದುದೇ. ದೇಹದ ನಿರ್ವಹಣೆಯಲ್ಲಿ ಎಲ್ಲ ಅಂಗಾಂಗಗಳ ಪಾತ್ರವೂ ಸಮಾನವಾದುದೇ. ಅಲ್ಲದೆ ಒಂದು ಅಂಗದ ಕಾರ್ಯವನ್ನು ಇನ್ನೊಂದು ಅಂಗವು ಮಾಡಲು ಸಾಧ್ಯವಿಲ್ಲ. ಇವುಗಳಲ್ಲಿ ಒಂದು ಮೇಲು, ಇನ್ನೊಂದು ಕೀಳು ಎಂಬ ಭೇದಭಾವ ಸಲ್ಲದು. ವಿಶ್ವದ ಕಣಕಣದಲ್ಲೂ ದಿವ್ಯತ್ವದ ಅಸ್ತಿತ್ವದ ಅರಿವನ್ನು ಸಾರುವ ಸನಾತನ ಧರ್ಮವು ಈ ನಾಲ್ಕು ವರ್ಣ ಅಥವಾ ವರ್ಗಗಳ ಮಧ್ಯೆ ಯಾವುದೇ ಭೇದಭಾವ ಮಾಡುವುದಿಲ್ಲ.

    ಪ್ರಾರಂಭದಲ್ಲಿ ಈ ಸಾಮಾಜಿಕ ವರ್ಗೀಕರಣ ವ್ಯವಸ್ಥೆ ಅತ್ಯಂತ ನಮ್ಯ (Flexible)ವಾಗಿತ್ತು; ಅದರಲ್ಲಿ ಯಾವುದೇ ಕಟ್ಟುನಿಟ್ಟಾದ ಗಡಸುತನ (Flexible)ವಿರಲಿಲ್ಲ. ಸಮಾಜದಲ್ಲಿ ವ್ಯಕ್ತಿಯ ಕರ್ಮ-ಕರ್ತವ್ಯಗಳು ಜನ್ಮದ (ವರ್ಗ, ಜಾತಿ, ವಂಶ, ಕುಲ) ಮೇಲೆ ಆಧಾರಿತವಾಗಿರದೆ, ಅವನ ಸಹಜಗುಣ, ಆಸಕ್ತಿ-ಪ್ರವೃತ್ತಿಗಳ ಆಧಾರದಲ್ಲಿ ನಿರ್ಣಯಿಸಲ್ಪಡುತ್ತಿದ್ದವು. ಒಂದು ವರ್ಗದಲ್ಲಿ ಜನಿಸಿದ ಒಬ್ಬ ವ್ಯಕ್ತಿ ತನ್ನ ಸಹಜ ಗುಣಗಳ ಆಧಾರದಲ್ಲಿ ಇನ್ನೊಂದು ವರ್ಗಕ್ಕೆ ಹೋಗಬಹುದಿತ್ತು; ಇದಕ್ಕೆ ಯಾವ ಅಡತಡೆಯೂ ಇರಲಿಲ್ಲ. ಇದರಿಂದ ವ್ಯಕ್ತಿಯ ಲೌಕಿಕ ಹಾಗೂ ಆಧ್ಯಾತ್ಮಿಕ ಉನ್ನತಿಗಳು ಸುಲಭಸಾಧ್ಯವಾಗಿದ್ದು, ಅವನಿಂದ ಸಮಾಜ ಕ್ಷೇಮಕ್ಕೂ ಉತ್ತಮ ಕೊಡುಗೆಯಾಗುತ್ತಿತ್ತು. ಇದನ್ನೇ ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’ (ನಾಲ್ಕನೆಯ ಅಧ್ಯಾಯದ ಹದಿಮೂರನೇ ಶ್ಲೋಕ). ಎಂದರೆ, ‘ಚತುರ್ವರ್ಣ ವ್ಯವಸ್ಥೆಯು ಗುಣ-ಕರ್ಮಗಳ ಆಧಾರದಲ್ಲಿ ನನ್ನಿಂದಲೇ ಸೃಷ್ಟಿಸಲ್ಪಟ್ಟಿದೆ.’ ಇದರ ಪ್ರಕಾರ ಸಾಮಾಜಿಕ ವರ್ಗೀಕರಣಕ್ಕೆ ವ್ಯಕ್ತಿಯ ಜನ್ಮವು ಆಧಾರವಾಗಿರಲಿಲ್ಲ; ಅವನ ಗುಣ-ಕರ್ಮಗಳೇ ಆಧಾರವಾಗಿದ್ದವು. ಹೀಗೆ ಒಬ್ಬ ವ್ಯಕ್ತಿ ಬ್ರಾಹ್ಮಣ ವರ್ಗದಲ್ಲಿ ಜನಿಸದಿದ್ದರೂ ಆತನ ಬುದ್ಧಿಶಕ್ತಿ ಪ್ರಖರವಾಗಿದ್ದು ಜ್ಞಾನಸಂಪಾದನೆ ಹಾಗೂ ಬೋಧನೆಗಳನ್ನು ಮಾಡಲು ಆಕಾಂಕ್ಷೆಯಿದ್ದಲ್ಲಿ ಆತನು ಬ್ರಾಹ್ಮಣ ವರ್ಗಕ್ಕೆ ಸೇರಬಹುದಾಗಿತ್ತು. ವ್ಯಕ್ತಿ ಯಾವುದೇ ವರ್ಗದಲ್ಲಿ ಹುಟ್ಟಿದರೂ ತನ್ನ ಸಹಜ ಪ್ರವೃತ್ತಿಗಳಿಗನುಗುಣವಾಗಿ ಇನ್ನಾವುದೇ ವರ್ಗಗಳಿಗೆ ಬದಲಾಗಬಹುದಾಗಿತ್ತು. ನಮ್ಮ ಪುರಾಣ-ಇತಿಹಾಸಗಳಲ್ಲಿ ಇದಕ್ಕೆ ಅನೇಕ ನಿದರ್ಶನಗಳಿವೆ. ವೇದಗಳನ್ನು ವಿಂಗಡಿಸಿ ಪುರಾಣ ಹಾಗೂ ಮಹಾಭಾರತಗಳನ್ನು ರಚಿಸಿದ ಭಗವಾನ್ ವೇದವ್ಯಾಸರ ತಂದೆ ಬ್ರಾಹ್ಮಣನಾಗಿದ್ದು ತಾಯಿ ಶೂದ್ರಳಾಗಿದ್ದಳು. ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ದರೋಡೆಕಾರರ ಕುಲದಲ್ಲಿ ಹುಟ್ಟಿದ್ದನು. ಕೌಶಿಕ ಮಹಾರಾಜನು ಕ್ಷತ್ರಿಯನಾಗಿ ಜನಿಸಿದ್ದರೂ, ಶಾಸ್ತ್ರಾಧ್ಯಯನ ಹಾಗೂ ಆಧ್ಯಾತ್ಮಿಕ ಸಾಧನೆಗಳನ್ನು ಮಾಡಿ ಮಹಾಬ್ರಾಹ್ಮಣನಾಗಿ ವಿಶ್ವಾಮಿತ್ರ ಮಹರ್ಷಿಯೆಂದು ಕರೆಯಲ್ಪಟ್ಟನು. ರಾಜಾ ಭತೃಹರಿ ತಪವನ್ನು ಆಚರಿಸಿ ಅನೇಕ ಆಧ್ಯಾತ್ಮಿಕ ಗ್ರಂಥಗಳನ್ನು ರಚಿಸಿದನು. ಬ್ರಾಹ್ಮಣ ಕುಲದಲ್ಲಿ ಜನಿಸಿದ ರಾವಣನು ಚಕ್ರವರ್ತಿಯಾದರೆ, ಹರಿಶ್ಚಂದ್ರ ಚಕ್ರವರ್ತಿಯು ಸ್ಮಶಾನದಲ್ಲಿ ಸೇವಕನಾಗಿ ಶೂದ್ರನಂತೆ ಕರ್ತವ್ಯ ನಿರ್ವಹಿಸಿದನು.

    ಸಮಾಜದ ಸುಗಮ, ಸಮರಸಮಯ ನಿರ್ವಹಣೆಗಾಗಿ ಉಗಮಿಸಿದ ಚತುರ್ವರ್ಣ ವ್ಯವಸ್ಥೆಯು ಕಾಲಾನುಕ್ರಮವಾಗಿ ಸ್ವಾರ್ಥಪರರಾದ ವ್ಯಕ್ತಿಗಳಿಂದ ತಪ್ಪಾಗಿ ಅರ್ಥೈಸಲ್ಪಟ್ಟು ಅವರ ಕೈಯಲ್ಲಿ ಸ್ವಾರ್ಥ-ಸ್ವಪ್ರಯೋಜನೆಗಳ ಸಾಧನವಾಗಿ ಮಾರ್ಪಾಡಾಯಿತು. ಇದರಿಂದಾಗಿ ಈ ವರ್ಗೀಕರಣದ ಆಚರಣೆ ಅಧಃಪತನಗೊಂಡು ನಮ್ಮ ಇಂದಿನ ಸಮಾಜದಲ್ಲಿ ವಿಭಜನೆ-ವಿರಸಗಳ ವಿಷದ ಮಡುವಾಗಿದೆ. ಆದರೆ ಸನಾತನ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವವರಿಗೆ ಈ ದುರಂತವು ಸುಲಭವಾಗಿ ಅರ್ಥವಾಗುತ್ತದೆ. ಅಂತಹ ವ್ಯಕ್ತಿಗಳು ಸಮಸ್ತ ಸೃಷ್ಟಿಯಲ್ಲಿ ಏಕತ್ವ ದರ್ಶನವನ್ನು ಮಾಡಿ, ವ್ಯಕ್ತಿಯು ತನ್ನ ದೇಹದ ಎಲ್ಲಾ ಅಂಗಾಂಗಗಳನ್ನು ಸಮಾನ ಅವಿಭಾಜ್ಯ ಅಂಗಗಳೆಂದು ಭಾವಿಸುವಂತೆ, ಎಲ್ಲರನ್ನೂ ಸಮಾನವಾಗಿ ಗೌರವಿಸಿ ಪ್ರೀತಿಸುತ್ತಾರೆ.

    ಮೂಲಾರ್ಥದಲ್ಲಿ ಚತುರ್ವಿಧ ವರ್ಣವ್ಯವಸ್ಥೆಯ ಪುನರುತ್ಥಾನವಾದಲ್ಲಿ ಸಮಾಜವು ಶಾಂತಿ-ಸಮರಸಗಳಿಂದ ತುಂಬಿ ತುಳುಕುವುದಲ್ಲವೇ!

    (ಲೇಖಕರು ವಿದ್ವಾಂಸರು, ಸಂಸ್ಕೃತಿ ಚಿಂತಕರು)

    ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

    ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts