ಜಿಲ್ಲೆಯಲ್ಲೂ ಜಾತಿ ರಾಜಕಾರಣದ ಸೋಂಕು

ಮೈಸೂರು: ಮೈಸೂರು ಜಿಲ್ಲೆಯಲ್ಲೂ ಜಾತಿ ರಾಜಕಾರಣದ ಸೋಂಕು ನಿಧಾನವಾಗಿ ಹರಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ, ರೂಪ ಪ್ರಕಾಶನದ ಸಹಯೋಗದಲ್ಲಿ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ 2 ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇಲ್ಲಿ ಜಾತಿ ರಾಜಕಾರಣ ಆಧಾರದ ಮೇಲೆ ಚುನಾವಣೆಯಲ್ಲಿ ಆಯ್ಕೆ ಮಾಡಿರಲಿಲ್ಲ. ಇದರಿಂದಾಗಿ ಹಿಂದುಳಿದ ವರ್ಗಗಳ, ಸೂಕ್ಷ್ಮ ಸಮುದಾಯಗಳ ನಾಯಕರು ಸಂಸದ, ಶಾಸಕರಾಗಿ ಆಯ್ಕೆಯಾದ ಉದಾಹರಣೆಗಳಿವೆ. ಆದರೀಗ ಇಲ್ಲೂ ಜಾತಿ ರಾಜಕೀಯ ಪಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರನ್ನು ಹೊಗಳಿದ ಸಿಎಂ, ಇವತ್ತಿನ ರಾಜಕಾರಣದಲ್ಲಿ ಮೈಸೂರಿನ ಸಿದ್ದರಾಮಯ್ಯ ಕೇಂದ್ರಬಿಂದು. ಅವರು 13 ಬಾರಿ ಬಜೆಟ್ ಮಂಡಿಸಿದ ಹಿರಿಮೆ ಹೊಂದಿದ್ದು, ಇದರೊಂದಿಗೆ ರಾಜ್ಯದ ರಾಜಕೀಯ ಚರಿತ್ರೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ. ಅವರ ಮಾರ್ಗದರ್ಶನ, ತಿಳಿವಳಿಕೆ ದಾರಿಯಲ್ಲೇ ಮೈತ್ರಿ ಸರ್ಕಾರ ನಡೆಯಲಿದೆ. ಅವರೊಂದಿಗೆ ಯಾವುದೇ ರಾಜಕೀಯ ಸಂಘರ್ಷ ಇಲ್ಲ ಎಂದು ಹೇಳಿದರು.
ಮದ್ಯ ನಿಷೇಧ ಸಾಧ್ಯವಿಲ್ಲ. ಈ ಕುರಿತು ಪಾದಯಾತ್ರೆಗಳು ನಡೆದಿವೆ. 2006ರಲ್ಲಿ ನಾನು ಸಿಎಂ ಆಗಿದ್ದಾಗ ಸಾರಾಯಿ ನಿಷೇಧ ಮಾಡಿದ್ದೆ. ಆದರೀಗ ಮದ್ಯ ಮಾರಾಟವನ್ನೂ ನಿಲ್ಲಿಸುವುದು ಈ ಕಾಲಘಟ್ಟದಲ್ಲಿ ಕಷ್ಟಕರವಾಗಿದೆ ಎಂದರು.

ಶಾಸಕ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ಅವಿಭಜಿತ ಮೈಸೂರು ಜಿಲ್ಲೆಯಿಂದ ಬಹಳಷ್ಟು ರಾಜಕಾರಣಿಗಳು ಶಾಸಕರು, ಸಚಿವ, ಸಂಸದರಾಗಿದ್ದಾರೆ. ಇಬ್ಬರು ಸಿಎಂ ಕೊಟ್ಟ ಜಿಲ್ಲೆ ಇದು. ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್‌ನಿಂದ ಹಿಡಿದು ಈಗಿನ ಸಿದ್ದರಾಮಯ್ಯವರೆಗೆ ಅನೇಕರು ತಮಗೆ ದೊರೆತ ಅಧಿಕಾರ, ಜವಾಬ್ದಾರಿಯನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ನಿರ್ವಹಿಸಿ ಜನನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.

ಮೋದಿ ಮಾಧ್ಯಮಗಳಿಗೆ ಹೆದರುವುದು ಏಕೆ? ಮೊನ್ನೆ ನಡೆದ ಮೊದಲ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅಮಿತ್ ಷಾ ಕಡೆಗೆ ಕೈ ತೋರಿಸಿದ್ದರು. ಎಲ್ಲ ಪ್ರಧಾನಿಗಳು ಮೋದಿ ರೀತಿ ಮಾಧ್ಯಮಗಳಿಗೆ ಹೆದರಲಿಲ್ಲ ಎಂದು ಜರಿದರು.

ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ತನ್ವೀರ್ ಸೇಠ್, ಎಲ್.ನಾಗೇಂದ್ರ, ಡಾ.ಯತೀಂದ್ರ ಸಿದ್ದರಾಮಯ್ಯ, ಹರ್ಷವರ್ಧನ್, ಅನಿಲ್‌ಚಿಕ್ಕಮಾದು, ಕೆ.ಟಿ.ಶ್ರೀಕಂಠೇಗೌಡ, ಆರ್.ಧರ್ಮಸೇನ ಮತ್ತಿತರರು ಹಾಜರಿದ್ದರು.

ಸಿದ್ದರಾಮಯ್ಯರನ್ನು ಹೊಗಳಿದ ವಿಶ್ವನಾಥ್: ಈಚೆಗೆ ಕಟುವಾಗಿ ಟೀಕೆ ಮಾಡಿದ್ದ ಸಿದ್ದರಾಮಯ್ಯ ಅವರನ್ನು ಎಚ್.ವಿಶ್ವನಾಥ್ ಹೊಗಳಿದರು. ‘ಅವರು 13 ಬಾರಿ ಹಣಕಾಸು ಸಚಿವರಾಗಿ ಉತ್ತಮ ಬಜೆಟ್ ಮಂಡಿಸಿದ್ದಾರೆ. ಅವರೇನು ದೊಡ್ಡ ಕುಟುಂಬದಿಂದ ಬಂದಿಲ್ಲ. ರೈತ ಮನೆಯಿಂದ ಬಂದ ಅವರು ಜನರಿಗೆ ಉತ್ತಮ ಕಾರ್ಯಕ್ರಮ ಕೊಟ್ಟಿದ್ದಾರೆ’ ಎಂದು ಬಣ್ಣಿಸಿದರು. ಈಚೆಗೆ ವಿಶ್ವನಾಥ್, ‘ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದ್ದಾರೆ’ ಎಂದು ಟೀಕಿಸಿದ್ದರು.

ಟಿವಿ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡ ಸಿಎಂ: ಮೈಸೂರಿನಲ್ಲೂ ಸಿಎಂ ಟಿವಿ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡರು. ಕಲಾಮಂದಿರ ಎದುರಿಗೆ ಮಾಧ್ಯಮ ಪ್ರತಿನಿಧಿಗಳು ನಿಂತಿದ್ದರು. ಇವರು ಕೋರಿಕೊಂಡರೂ ಅವರೊಂದಿಗೆ ಮಾತನಾಡದೆ ಒಳ ಪ್ರವೇಶಿಸಿದರು. ಕಾರ್ಯಕ್ರಮದ ಮುಗಿದ ಬಳಿಕ ಮತ್ತೆ ಮಾಧ್ಯಮ ಪ್ರತಿನಿಧಿಗಳು, ಅವರನ್ನು ಮಾತನಾಡಿಸಲು ಅದೇ ಸ್ಥಾನದಲ್ಲಿ ನಿಂತಿದ್ದರು. ಆದರೆ, ಅವರು ಮತ್ತೊಂದು ದ್ವಾರದಿಂದ ನಿರ್ಗಮಿಸಿದರು.

Leave a Reply

Your email address will not be published. Required fields are marked *