ಇಲ್ಲಿವರೆಗೆ ಚುನಾವಣಾ ಆಯೋಗ ವಶಪಡಿಸಿಕೊಂಡ ಹಣದ ಮೊತ್ತ ಕೇಳಿದರೆ ಶಾಕ್​ ಆಗುವುದು ಖಂಡಿತ!

ನವದೆಹಲಿ: ಒಟ್ಟು ಏಳು ಹಂತಗಳ ಲೋಕಸಭಾ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಇಂದು ಮುಕ್ತಾಯವಾಗಿದ್ದು, ಆರು ಹಂತದ ಮತದಾನ ಬಾಕಿ ಇದೆ. ಎಲ್ಲೆಡೆ ಚುನಾವಣಾ ಪ್ರಚಾರದ ಭರಾಟೆ ಭರ್ಜರಿಯಾಗಿ ನಡೆಯುತ್ತಿದೆ. ಇದರ ಮಧ್ಯೆ ಮತದಾರರಿಗೆ ಆಮಿಷವೊಡ್ಡಲು ಹೆಂಡ ಹಾಗೂ ಹಣದ ಹೊಳೆಯನ್ನು ಹರಿಸುತ್ತಿದ್ದು, ಇಲ್ಲಿಯವರೆಗೆ ಚುನಾವಣಾ ಆಯೋಗ ವಶಪಡಿಸಿಕೊಂಡಿರುವ ಹಣದ ಮೊತ್ತವನ್ನು ಬಹಿರಂಗಪಡಿಸಿದೆ.

ಇಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾ ಆಯೋಗದ ಅಧಿಕಾರಿಗಳು ಗುರುವಾರದವರೆಗೆ ಒಟ್ಟು 1800 ಗಂಟೆಗಳ ಅವಧಿಯಲ್ಲಿ 607 ಕೋಟಿ ರೂ. ನಗದು, 198 ಕೋಟಿ ರೂ. ಮೌಲ್ಯದ ಮದ್ಯ, 1091 ಕೋಟಿ ರೂ. ಮೌಲ್ಯದ ನಾರ್ಕೋಟಿಕ್ಸ್​ ಮತ್ತು ಡ್ರಗ್ಸ್​, 486 ಕೋಟಿ ರೂ. ಮೌಲ್ಯದ ಬೆಲೆಬಾಳುವ ಲೋಹಗಳು ಹಾಗೂ 48 ಕೋಟಿ ರೂ. ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಎಲ್ಲ ಸೇರಿ ಒಟ್ಟು 2626 ಕೋಟಿ ರೂ. ಮೊತ್ತವನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.

ಚುನಾವಣಾ ಆಯೋಗ ಇನ್ನು ಕೂಡ ಜಾಗರೂಕವಾಗಿದ್ದು, ದೇಶದಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಹಾಗೂ ನ್ಯಾಯೋಚಿತ ಮಾದರಿಯಲ್ಲಿ ಸಾಗಬೇಕೆಂಬುದನ್ನು ಈ ಮೂಲಕ ಖಚಿತಪಡಿಸುತ್ತಿದೆ. ಯಾವುದೇ ಪಕ್ಷವಾಗಲಿ ಅಥವಾ ರಾಜಕೀಯ ನಾಯಕನಾಗಲಿ ಅನಗತ್ಯ ಪ್ರಯೋಜನಕ್ಕೆ ಕೈ ಹಾಕಬಾರದೆಂದು ಆಯೋಗ ಎಚ್ಚರಿಕೆ ನೀಡಿದೆ.

ಹಣ, ಮದ್ಯ, ಡ್ರಗ್ಸ್​ ಮತ್ತು ಇತರೆ ವಸ್ತುಗಳನ್ನು ಪದೇ ಪದೇ ಬಳಸಿ ಜನರಿಗೆ ಆಮಿಷವೊಡ್ಡಿ ದೇಶದಲ್ಲಿ ಮತದಾನ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯತ್ನವಾಗಿದೆ. ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಾದಾಗಿನಿಂದ ಈ ಬಗ್ಗೆ ಬಹಳ ಶಿಸ್ತುಬದ್ಧವಾದ ಕಾರ್ಯಾಚರಣೆ ನಡೆಸಿದ ಚುನಾವಣಾ ಆಯೋಗ ಹಣ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಮೂಲಕ ಯಾವುದೇ ಪಕ್ಷವಾಗಲಿ, ಸಂಘವಾಗಲಿ ಹಾಗೂ ರಾಜಕೀಯ ವ್ಯಕ್ತಿಯಾಗಲಿ ಯಾರೊಬ್ಬರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಚುನಾವಣಾ ಆಯೋಗ ಖಚಿತಪಡಿಸಿದೆ ಎಂದು ತಿಳಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *