ಸವದತ್ತಿ: ವಾಂತಿಭೇದಿ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಲೋಪ ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಲ್ಲಿನ ತಾಪಂ ಸಭಾಭವನದಲ್ಲಿ ತಾಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದಿಂದ ಕಲುಷಿತ ನೀರು ಸೇವನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಶುದ್ಧ ನೀರು ಪೂರೈಸುವುದು ನಮ್ಮೆಲ್ಲರ ಜವಾಬ್ದಾರಿ. ಮಳೆ ನೀರು ಸೇರ್ಪಡೆಯಿಂದ ಪಟ್ಟಣ ಸೇರಿ ಕೆಲವೆಡೆ ವಾಂತಿಭೇದಿ ಪ್ರಕರಣಗಳು ಕಂಡುಬಂದಿದ್ದು, ಸಾರ್ವಜನಿಕರ ರಕ್ಷಣೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಸವದತ್ತಿ, ಹೂಲಿಕಟ್ಟಿ ಗ್ರಾಮಗಳ ವಾಂತಿಭೇದಿ ಪ್ರಕರಣದಲ್ಲಿ ತ್ವರಿತವಾಗಿ ಉತ್ತಮ ಚಿಕಿತ್ಸೆ ನೀಡಿದ ಆರೋಗ್ಯ ಇಲಾಖೆಯ ಕಾರ್ಯ ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತೆಯ ಕುರಿತು ಜಾಗತಿ ಮೂಡಿಸಬೇಕು ಎಂದರು.
ತಾಪಂ ಇಒ ಯಶವಂತಕುಮಾರ ಮಾತನಾಡಿ, ನೀರನ್ನು ಕಾಯಿಸಿ ಆರಿಸಿದ ನಂತರ ಕುಡಿಯುವಂತೆ ಗ್ರಾಮೀಣರಿಗೆ ಜಾಗತಿ ಮೂಡಿಸಬೇಕು. ಒಗ್ಗಟ್ಟಿನಿಂದ ಕುಡಿಯುವ ನೀರಿನ ಸಮಸ್ಯೆ ತಡೆಗಟ್ಟಲು ಸಾಧ್ಯ ಎಂದರು.
ವೈದ್ಯಾಧಿಕಾರಿ ಎಚ್.ಎಂ. ಮಲ್ಲನಗೌಡರ ಮಾತನಾಡಿ, ಚಿಕ್ಕ ಮಕ್ಕಳು, ಹಿರಿಯರಲ್ಲಿ ಹೆಚ್ಚು ವಾಂತಿಭೇದಿ ಪ್ರಕರಣಗಳು ಕಂಡು ಬಂದಿವೆ. ಹಾಗಾಗಿ ಕಾಯಿಸಿ ಶುದ್ಧ ನೀರು ಕುಡಿಯಬೇಕು. ಗ್ರಾಮಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ನೀರಿನ ಗುಣಮಟ್ಟ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಪೂರೈಸಬೇಕು. ಪ್ರತಿಯೊಬ್ಬರೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ ಎಂದರು.
ಶಾಸಕ ವಿಶ್ವಾಸ ವೈದ್ಯ ಕುಡಿಯುವ ನೀರು ಜಾಗೃತಿ ಕರಪತ್ರ ಹಾಗೂ ನೀರಿನ ಗುಣಮಟ್ಟ ಪರಿಶೀಲನೆಯ ಕಿಟ್‌ಗಳನ್ನು ಪಿಡಿಒಗಳಿಗೆ ಹಸ್ತಾಂತರಿಸಿದರು. ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗಾಧಿಕಾರಿ ಬಸವರಾಜ ಅಯ್ಯನಗೌಡರ ಸೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿದ್ದರು.