ರೈತರ ಮೇಲಿನ ಕೇಸ್ ಹಿಂಪಡೆಯಲು ಎಸಿ ಕಚೇರಿ ಆವರಣದಲ್ಲಿ ರೈತ ಸಂಘ ಪ್ರತಿಭಟನೆ

ಲಿಂಗಸುಗೂರು: ಬಗರ್ ಹುಕುಂ ಸಾಗುವಳಿ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದು ಹಾಗೂ ಪಟ್ಟಾ ವಿತರಣೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಶುಕ್ರವಾರ ಎಸಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ತಾಲೂಕಿನ ಪೂಲಬಾವಿ, ಗುಂತಗೋಳ, ಯಲಗಟ್ಟಾ, ಭೂಪುರ, ಪರಾಂಪುರ, ಐದಬಾವಿ, ರಾಮಲೂಟಿ, ಬಸಾಪುರ, ರಾಂಪುರ ಸೇರಿ ಇತರ ಗ್ರಾಮಗಳ ಎಸ್ಸಿ, ಎಸ್ಟಿ ಸಮುದಾಯದ ರೈತರು 2-3 ತಲೆಮಾರುಗಳಿಂದ ಸರ್ಕಾರದ ಹಾಗೂ ಅರಣ್ಯ ಇಲಾಖೆ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ವಲಯ ಅರಣ್ಯಾಧಿಕಾರಿ ಕಳೆದೊಂದು ವರ್ಷದಿಂದ ರೈತರಿಗೆ ವಿನಾಕಾರಣ ತೊಂದರೆ ನೀಡಿ ಒಕ್ಕಲೆಬ್ಬಿಸಿದ್ದಲ್ಲದೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರನ್ನು ಬೇರೆಡೆ ವರ್ಗಾಯಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ನೆಟ್ಟ ಸಸಿಗಳು ನೀರಿಲ್ಲದೆ ಒಣಗಿವೆ. ಇದರಲ್ಲಿ ಅಕ್ರಮ ನಡೆದಿರುವ ಅನುಮಾನವಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಧರಣಿನಿರತರು ಆಗ್ರಹಿಸಿದರು. ಬಳಿಕ ಎಸಿ ಕಚೇರಿ ಶಿರಸ್ತೇದಾರ್ ರಾಮಲಿಂಗ ಪತ್ತಾರ ಹಾಗೂ ವಲಯ ಅರಣ್ಯಾಧಿಕಾರಿ ಎಸ್.ಬಿ.ಕಾಂಬ್ಳೆಗೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ರಾಜ್ಯ ಕಾರ್ಯದರ್ಶಿ ಸೂಗೂರಯ್ಯಸ್ವಾಮಿ, ರಾಜ್ಯ ಮುಖಂಡ ಅಮರಣ್ಣ ಗುಡಿಹಾಳ, ಜಿಲ್ಲಾ ಅಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಮುಖಂಡರಾದ ಬಸನಗೌಡ ಬಲ್ಲಟಗಿ ಇತರರಿದ್ದರು.