ಸೆರೆನಾ ವಿಲಿಯಮ್ಸ್​ ವ್ಯಂಗ್ಯಚಿತ್ರ ಬಿಡಿಸಿ ಟೀಕೆಗೆ ಗುರಿಯಾದ ಆಸ್ಟ್ರೇಲಿಯಾ ವ್ಯಂಗ್ಯಚಿತ್ರಕಾರ​

ಸಿಡ್ನಿ: ಟೆನ್ನಿಸ್​ ಆಟಗಾರ್ತಿ ಸೆರೆನಾ ವಿಲಿಯಮ್ಸ್​​ ಅವರ ವ್ಯಂಗ್ಯ ಚಿತ್ರವನ್ನು ಬಿಡಿಸಿರುವ ಆಸ್ಟ್ರೇಲಿಯಾದ ವ್ಯಂಗ್ಯ ಚಿತ್ರಕಾರ ಮಾರ್ಕ್​ ನೈಟ್​ ತೀವ್ರ ಟೀಕೆಗೆ ಗುರಿಯಾಗಿದ್ದು, ಹ್ಯಾರಿ ಪಾಟರ್​ ಲೇಖಕಿ ಜೆ.ಕೆ. ರಾವ್ಲಿಂಗ್​ ಇದು ಜನಾಂಗೀಯ ಹಾಗೂ ಲಿಂಗಭೇದ ಎಂದು ನಿಂದಿಸಿದ್ದಾರೆ.

ಮಾರ್ಕ್​ ನೈಟ್​ ಅವರ ವ್ಯಂಗ್ಯ ಚಿತ್ರ ‘ಮೆಲ್ಬೋರ್ನ್​ ಹೆರಾಲ್ಡ್​ ಸನ್’​ ಪತ್ರಿಕೆಯಲ್ಲಿ ಸೋಮವಾರ ಪ್ರಕಟಗೊಂಡಿದ್ದು, ಚಿತ್ರದಲ್ಲಿ ವಿಲಿಯಮ್ಸ್​ ಅವರ ತುಟಿಯನ್ನು ವ್ಯಂಗ್ಯವಾಗಿ ತೋರಿಸಲಾಗಿದೆ. ಯುಎಸ್​ ಓಪನ್​ನಲ್ಲಿ ಜಂಪ್​ ಮಾಡಿ ತಮ್ಮ ಟೆನ್ನಿಸ್​ ರಾಕೆಟ್​ ಅನ್ನು ಮುರಿಯುತ್ತಿರುವ ಗಂಡುಬೀರಿಯ ರೂಪದಲ್ಲಿ ಚಿತ್ರೀಕರಿಸಲಾಗಿದೆ.

ಈ ವಾರ ನಡೆದ ಯುಎಸ್​ ಓಪನ್​ ಟೆನ್ನಿಸ್ ಪಂದ್ಯಾವಳಿ ವೇಳೆ ಸೋಲಿಗೆ ಶರಣಾದ ವಿಲಿಯಮ್ಸ್​ ಅವರು ಅಂಪೈರ್​ ವಿರುದ್ಧ ಕೆಂಡಾಮಂಡಲರಾಗಿದ್ದನ್ನು ಇಡೀ ಜಗತ್ತು ನೋಡಿತ್ತು.​

ಪಂದ್ಯದ ನೀತಿಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿ ವಿಲಿಯಮ್ಸ್​ ಅವರಿಗೆ 17,000 ಯುಎಸ್​ ಡಾಲರ್​ ದಂಡವನ್ನು ವಿಧಿಸಲಾಗಿದೆ.

24ನೇ ದಾಖಲೆಯ ಗ್ರ್ಯಾಂಡ್​ಸ್ಲ್ಯಾಮ್ ಗೆಲ್ಲುವ ಅವರ ಕನಸಿಗೆ ಜಪಾನ್​ನ ನವಾಮಿ ಒಸಾಕ ಅವರು ತಣ್ಣೀರೆರಚಿದರು. ಇದರಿಂದ ಹತಾಶೆಗೊಂಡ ವಿಲಿಯಮ್ಸ್​ ಅಂಪೈರ್​ ವಿರುದ್ಧ ಕಿರುಚಾಡಿ ಸುದ್ದಿಯಾಗಿದ್ದರು.​

ವ್ಯಂಗ್ಯ ಚಿತ್ರದಲ್ಲಿ ಅಂಪೈರ್​ ಒಸಾಕ ಅವರ ಕಡೆ ನೋಡಿ ‘ಅವಳು ಗೆಲ್ಲಲು ನೀನು ಬಿಡಬಹುದಾ?’ ಎಂದು ಹೇಳಿದ ರೀತಿ ಚಿತ್ರೀಕರಿಸಲಾಗಿದೆ. ವಿವಾದಕ್ಕೆ ಎಡೆಮಾಡಿಕೊಟ್ಟ ಇಂತಹ ವ್ಯಂಗ್ಯ ಚಿತ್ರವನ್ನು ಬರೆದ ನೈಟ್​​ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​) 

https://twitter.com/Knightcartoons/status/1039017329030393856