ಮುಂಬೈ: ದೇಶದ ಕಾರು ಮಾರುಕಟ್ಟೆಯ ಕಳೆದ ತಿಂಗಳ ಕಾರು ಮಾರಾಟ ದತ್ತಾಂಶ ಪ್ರಕಾರ, ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಕಾರುಗಳದ್ದೇ ಕಾರುಬಾರು. ಆದಾಗ್ಯೂ, ಭಾರತೀಯ ಮಾರುಕಟ್ಟೆ ಇತ್ತೀಚೆಗೆ ಪ್ರವೇಶಿಸಿದ ಕಿಯಾ ಕಂಪನಿಯ ಕಾರು ಸೇರ್ಪಡೆಗೊಂಡು ಇಂಡಸ್ಟ್ರಿ ಜನರ ಹುಬ್ಬೇರುವಂತೆ ಮಾಡಿದೆ.
ಭಾರತದ ಮಟ್ಟಿಗೆ ಮಾರುತಿ ಸುಜುಕಿ ಕಂಪನಿ ಜನರಿಗೆ ಅತ್ಯಂತ ವಿಶ್ವಾಸಾರ್ಹವಾದುದು ಎಂಬುದು ದಶಕಗಳಿಂದ ಸಾಬೀತಾಗಿರುವ ವಿಚಾರ. ಕಳೆದ ತಿಂಗಳಿನ ಮಾರಾಟದ ದತ್ತಾಂಶವೂ ಅದನ್ನೇ ಎತ್ತಿಹಿಡಿದಿದೆ. ಟಾಪ್ 10 ಕಾರುಗಳ ಪೈಕಿ ಮಾರುತಿಗೇ ಸಿಂಹಪಾಲು. ಮಾರುತಿಯ ಎಂಟು ಕಾರುಗಳು ಪಟ್ಟಿಯಲ್ಲಿದ್ದರೆ, ಹ್ಯುಂಡೈನ ಐ20 ಎಲೈಟ್, ಕಿಯಾ ಕಂಪನಿಯ ಸೆಲ್ಟೋಸ್ ಕಾರುಗಳು ಉಳಿದವು.
ಅಗ್ರಸ್ಥಾನದಲ್ಲಿ ಮಾರುತಿ ಡಿಸೈರ್ ಇದ್ದು, ಅಕ್ಟೋಬರ್ ತಿಂಗಳಲ್ಲಿ 19,569 ಕಾರುಗಳು ಮಾರಾಟವಾಗಿವೆ. ಎರಡನೇ ಸ್ಥಾನದಲ್ಲಿ ಸ್ವಿಫ್ಟ್ ಕಾರು, ಮೂರನೇ ಸ್ಥಾನದಲ್ಲಿ ಆಲ್ಟೋ ಇವೆ. ಹ್ಯುಂಡೈನ ಐ20 ಎಲೈಟ್ ಕಾರು ಐದನೇ ಸ್ಥಾನದಲ್ಲಿದ್ದು, 14,683 ಕಾರುಗಳು ಮಾರಾಟವಾಗಿದ್ದರೆ, ಏಳನೇ ಸ್ಥಾನದಲ್ಲಿರುವ ಕಿಯಾ ಕಂಪನಿಯ ಸೆಲ್ಟೋಸ್ 12,850 ಕಾರುಗಳು ಮಾರಾಟವಾಗಿವೆ. (ಏಜೆನ್ಸೀಸ್)