ಸವದತ್ತಿ ಬಳಿ ಜೆಸಿಬಿ ಚಾಲಕನ ಹತ್ಯೆ

ಬೆಳಗಾವಿ: ಸವದತ್ತಿ ಪಟ್ಟಣದ ಸಮೀಪ ಅರಣ್ಯ ಇಲಾಖೆಯ ಕಾಮಗಾರಿ ಮಾಡುತ್ತಿದ್ದ ಜೆಸಿಬಿ ಚಾಲಕನನ್ನು ದುಷ್ಕರ್ಮಿಗಳು ಬುಧವಾರ ತಡರಾತ್ರಿ ಕಲ್ಲಿನಿಂದ ತಲೆ ಜಜ್ಜಿ ಹತ್ಯೆ ಮಾಡಿದ್ದಾರೆ.

ಸವದತ್ತಿ ತಾಲೂಕಿನ ಕಾತ್ರಾಳ ಗ್ರಾಮದ ನಿವಾಸಿ ಶ್ರೀಕಾಂತ ಕಳ್ಳೀಮನಿ(24) ಕೊಲೆಯಾದವ. ಒಂದು ವಾರದಿಂದ ಅರಣ್ಯ ಇಲಾಖೆಯ ಕಾಮಗಾರಿಗಾಗಿ ಚಿದಂಬರ ಆಡಿನ್ ಎಂಬುವರ ಮಾಲೀಕತ್ವದ ಜೆಸಿಬಿಯಲ್ಲಿ ಈತ ಕೆಲಸ ಮಾಡುತ್ತಿದ್ದ.

ದುಷ್ಕರ್ಮಿಗಳು ಸವದತ್ತಿ ಹಾಗೂ ಬೈಲಹೊಂಗಲ ರಸ್ತೆಯ ಕರಿಕಟ್ಟಿ ಕ್ರಾಸ್ ಹತ್ತಿರ ಆತನನ್ನು ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೌಂದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.