ಇಬ್ಬರು ಸರಗಳ್ಳರ ಬಂಧನ, ಬೈಕ್ ವಶ

ಬೀರೂರು: ಪಟ್ಟಣದ ಕಲ್ಯಾಣ ಮಂಟಪಗಳು, ವಸತಿ ಪ್ರದೇಶಗಳಲ್ಲಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಪಟ್ಟಣದ ಪೊಲೀಸರು ಬಂಧಿಸಿ, 4.48 ಲಕ್ಷ ರೂ. ಮೌಲ್ಯದ ಬಂಗಾರದ ಸರ ಮತ್ತು 2 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ತರೀಕೆರೆ ತಾಲೂಕು ಅಮೃತಾಪುರ ಹೋಬಳಿಯ ನಾಗೇನಳ್ಳಿ ಗ್ರಾಮದ ಅಶೋಕ (31) ಮತ್ತು ಮುರುಗೇಶ್ (30) ಬಂಧಿತ ಆರೋಪಿಗಳು.

2018ರ ಮಾರ್ಚ್ 26ರಂದು ಕರಿಗಲ್ ಬೀದಿಯ ನಿವಾಸಿ ಮಂಗಳಮ್ಮ ಅವರು ಮನೆಯಲ್ಲಿ ಒಣಹಾಕಿದ್ದ ಬಟ್ಟೆ ಗಳನ್ನು ತೆಗೆದುಕೊಳ್ಳುವಾಗ ಬೈಕ್​ನಲ್ಲಿ ಬಂದಿದ್ದ ಆರೋಪಿಗಳು ಚೀಟಿ ತೋರಿಸಿ ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಅಪಹರಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ಇದೇ ಆರೋಪಿಗಳು ರಾತ್ರಿ 10.45ರ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತ್ರಿನೇತ್ರ ಕಲ್ಯಾಣ ಮಂದಿರದಕ್ಕೆ ಮದುವೆಗೆ ಆಗಮಿಸಿದ್ದ ಬೆಂಗಳೂರಿನ ಮಂಜುಳಾ ಅವರ ಚಿನ್ನದ ಸರ ಅಪಹರಿಸಿದ್ದರು.

ಕಡೂರು-ಬೀರೂರು-ತರೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೆ ಸುಲಿಗೆ ಮತ್ತು ಡಕಾಯಿತಿ ಪ್ರಕರಣಗಳು ದಾಖಲಾಗುತ್ತಿದ್ದರಿಂದ ಎಸ್ಪಿ ಹರೀಶ್ ಪಾಂಡೆ, ಎಎಸ್ಪಿ ಶ್ರುತಿ, ತರೀಕೆರೆ ಡಿವೈಎಸ್ಪಿ ತಿರುಮಲೇಶ್ ಮಾರ್ಗದರ್ಶನದಂತೆ ಬೀರೂರು ಸಿಪಿಐ ಸತ್ಯನಾರಾಯಣ ಸ್ವಾಮಿ, ಪಿಎಸೈ ರಾಜಶೇಖರ್ ಅವರು ಕಲ್ಯಾಣ ಮಂಟಪದ ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದರು.