ಹೃದಯಸಂಬಂಧಿ ಕಾಯಿಲೆ: ವಾಯು ಮಾಲಿನ್ಯ ಹೇಗೆ ಕಾರಣ ಗೊತ್ತಾ?

ವಾಷಿಂಗ್ಟನ್‌: ವಾಯು ಮಾಲಿನ್ಯವು ಹಲವಾರು ರೀತಿಯಲ್ಲಿ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿ ಉಸಿರಾಟದ ವ್ಯವಸ್ಥೆ, ಹೃದಯ ಮತ್ತು ಮಿದುಳಿನ ಮೇಲೆ ತೀವ್ರ ತರವಾದ ದುಷ್ಪರಿಣಾಮ ಬೀರುತ್ತದೆ.

ಇದಲ್ಲದೆ ಗರ್ಭಿಣಿಯರ ಮೇಲೂ ಪರಿಣಾಮ ಬೀರಲಿದ್ದು, ಅಕಾಲಿಕ ಜನನ ಮತ್ತು ಮಕ್ಕಳು ಜೀವನ ಪರ್ಯಂತ ಹೃದಯಸಂಬಂಧಿ ಸಮಸ್ಯೆ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸುವಂತೆ ಮಾಡುತ್ತದೆ. ಆದರೆ ಹೊಸ ಅಧ್ಯಯನವೊಂದರ ಪ್ರಕಾರ ವಾಯು ಮಾಲಿನ್ಯವು ಹೃದಯ ರಕ್ತನಾಳದ ಕಾಯಿಲೆಗಳಿಗೂ ಕಾರಣವಾಗಬಹುದು ಎನ್ನುವುದು ತಿಳಿದು ಬಂದಿದೆ.

ಅದರಂತೆ ವಾಯು ಮಾಲಿನ್ಯ, ಧೂಳಿನ ಕಣಗಳಿಂದಾಗಿಯೇ ಪ್ರತಿವರ್ಷ ನಾಲ್ಕು ದಶಲಕ್ಷಗಳಿಗಿಂತ ಅಧಿಕ ಮಂದಿಯನ್ನು ಬಲಿ ಪಡೆಯುತ್ತಿದೆ. ಅಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಶೇ. 60 ರಷ್ಟು ಜನರು ಮೃತಪಡುತ್ತಿದ್ದಾರೆ.

ವಾಯು ಮಾಲಿನ್ಯದಿಂದಾಗಿ ಪ್ರತಿ ವರ್ಷ ಹೃದಯ ಸಂಬಂಧಿ ಕಾಯಿಲೆಯಿಂದಾಗಿಯೇ 2.4 ಮಿಲಿಯನ್ ಜನರು ಸಾವಿಗೆ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಅಂದಾಜಿಸಿದ್ದು, ಹೃದಯದ ರಕ್ತನಾಳಗಳ ಕಾಯಿಲೆಗೆ ಸಂಬಂಧಿಸಿದಂತೆ ಜರ್ಮನಿ, ಇಂಗ್ಲೆಂಡ್, ಮತ್ತು ಅಮೆರಿಕ ಸೇರಿ ಅಂತಾರಾಷ್ಟ್ರೀಯ ತಜ್ಞರ ತಂಡವು ಅಧಿಕ ಸಾವು ಸಂಭವಿಸುತ್ತಿದೆ ಎನ್ನುವುದನ್ನು ವಿಶ್ಲೇಶಿಸಿದ್ದಾರೆ.

ರಕ್ತನಾಳದ ವ್ಯವಸ್ಥೆ ಹೇಗೆ ಹಾಳಾಗುತ್ತದೆ?

ಅಧ್ಯಯನದ ವೇಳೆ ತಿಳಿದಿರುವಂತೆ ವಾಯುಮಾಲಿನ್ಯ (ಕಣ ವಸ್ತು, ಓಝೋನ್, ನೈಟ್ರೋಜನ್‌ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್) ದಿಂದಾಗಿ ರಕ್ತನಾಳದ ವ್ಯವಸ್ಥೆ ಮತ್ತು ರಕ್ತನಾಳಗಳ ಯಾಂತ್ರಿಕ ವ್ಯವಸ್ಥೆಗೆ ಹಾನಿ ಮಾಡುತ್ತವೆ ಎಂದು ಯೂರೋಪಿಯನ್‌ ಹಾರ್ಟ್‌ ಜರ್ನಲ್‌ ತಿಳಿಸಿದೆ.
ಉಸಿರೆಳೆದಾಗ ವೈರಸ್‌ನಷ್ಟು ಗಾತ್ರವಿರುವ ಅತಿ ಸೂಕ್ಷ್ಮ ಧೂಳಿನ ಕಣವು ಶ್ವಾಸಕೋಶದ ಮೂಲಕ ರಕ್ತನಾಳದೊಳಗೆ ಪ್ರವೇಶಿಸುತ್ತದೆ. ಇದು ರಕ್ತದೊಂದಿಗೆ ಸೇರಿಕೊಂಡು ಉರಿಯೂತವನ್ನು ಉಂಟು ಮಾಡುತ್ತದೆ.

ಇದು ಅಪಧಮನಿ (vascular calcification)ಗೆ ಹಾನಿಯನ್ನು ಉಂಟುಮಾಡುತ್ತದೆ. ಇದು ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಮುಂತಾದ ರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಲ್ಲದೆ, ಹೃದಯಾಘಾತ ಮತ್ತು ಹೃದಯದ ಬಡಿತದಲ್ಲಿ ಏರು ಪೇರು ಉಂಟಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್‌ ಉರಿಸುವಿಕೆಯಿಂದ ಹೊರಸೂಸಲ್ಪಡುವ ಸೂಕ್ಷ್ಮ ಧೂಳಿನ ಕಣ ಮತ್ತು ನೈಟ್ರೋಜನ್‌ ಡೈ ಆಕ್ಸೈಡ್‌ ರಕ್ತನಾಳಗಳ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)