ಚರಂಡಿಯಲ್ಲಿ ವೋಟರ್ ಐಡಿ ಪತ್ತೆ

ಮೂಡಿಗೆರೆ: ಪಟ್ಟಣದ ಮಾರ್ಕೆಟ್ ರಸ್ತೆ ಬದಿಯ ಚರಂಡಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಮತದಾರರ ಗುರುತಿನ ಚೀಟಿಗಳನ್ನು ಸ್ಥಳೀಯರು ಸಂಗ್ರಹಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಾರ್ಕೆಟ್ ರಸ್ತೆಯ ಮಕ್ಕಳು ಮಳೆ ನೀರಿನಲ್ಲಿ ಆಟವಾಡುತ್ತಿದ್ದಾಗ ಪಕ್ಕದಲ್ಲಿದ್ದ ಚರಂಡಿಯಲ್ಲಿ ಮತದಾರರ ಗುರುತಿನ ಚೀಟಿಗಳು ತೇಲಿಹೋಗುತ್ತಿರುವುದನ್ನು ಗಮನಿಸಿದ್ದಾರೆ. ಸ್ಥಳದಲ್ಲಿದ್ದ ಸಬ್ಬೇನಹಳ್ಳಿ ಹಂಝು ಅವರಿಗೆ ಮಕ್ಕಳು ತೋರಿಸಿದ್ದಾರೆ.

ಹಂಝು ಅವರು ಚರಂಡಿ ನೀರಿನಲ್ಲಿದ್ದ 4 ಗುರುತಿನ ಚೀಟಿಗಳನ್ನು ತೆಗೆದಿ ಪರಿಶೀಲಿಸಿದಾಗ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಛತ್ರ ಮೈದಾನದ ಇಬ್ಬರು ಮಹಿಳೆಯರ ಗುರುತಿನ ಚೀಟಿಯಾಗಿತ್ತು.

ಚರಂಡಿಯಲ್ಲಿ 100ಕ್ಕೂ ಅಧಿಕ ಗುರುತಿನ ಚೀಟಿ ಕೊಚ್ಚಿಹೋಗಿರಬಹುದೆಂದು ಶಂಕಿಸಿದ್ದು, ಸಿಕ್ಕ ಗುರುತಿನ ಚೀಟಿಗಳನ್ನು ಪೊಲೀಸ್ ಠಾಣೆಗೆ ನೀಡಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಈಗ ಚರಂಡಿಯಲ್ಲಿ ಸಿಕ್ಕಿರುವ ಗುರುತಿನ ಚೀಟಿ ವಾರಸುದಾರರಿಗೆ ನೋಟಿಸ್ ನೀಡಿ ಮಾಹಿತಿ ಸಂಗ್ರಹಿಸಲಾಗುವುದು. ಅಲ್ಲದೆ ಯಾವ ಕಾರಣಕ್ಕೆ ಚರಂಡಿಯಲ್ಲಿ ಗುರುತಿನ ಚೀಟಿ ಹರಿದುಬಂದಿದೆ ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಮೂಡಿಗೆರೆ ಪಿಎಸ್​ಐ ರಫೀಕ್ ತಿಳಿಸಿದ್ದಾರೆ.