ಗೊಳಸಂಗಿ: ಗ್ರಾಮದ ಮಾದರಿ ಬಡಾವಣೆ ಬಳಿ ಶುಕ್ರವಾರ ಬೆಳಗ್ಗೆ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರಿನ ಮುಂಬದಿಯ ಎರಡೂ ಚಕ್ರ ದಿಢೀರೆಂದು ಸ್ಪೋಟಗೊಂಡು ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ನೇಪಾಳ ಮೂಲದ ಗೂಡ್ಸ್ ಲಾರಿಗೆ ರಭಸವಾಗಿ ಡಿಕ್ಕಿಯಾಗಿದೆ.
ಕಾರಿನಲ್ಲಿದ್ದ ವಿಜಯಪುರದ ಸಾವಿತ್ರಿ ಕಾಶಪ್ಪ ಚಿಮ್ಮಲಗಿ (52) ಅವರ ಮೂಗು, ಬಾಯಿ ಹಾನಿಯಾಗಿ ತೀವ್ರ ರಕ್ತಸ್ರಾವವಾಗಿದೆ.
ಕಾರು ಚಲಾಯಿಸುತ್ತಿದ್ದ ಅವರ ಪತಿ ಕಾಶಪ್ಪ ಗುರಪ್ಪ ಚಿಮ್ಮಲಗಿ (57) ಅವರ ಕೈ ಮತ್ತಿತರ ಭಾಗದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.
ಕೂಡಲೇ ಅವರನ್ನು ತೆಲಗಿಯಿಂದ ಬಂದ 108 ಆಂಬುಲೆನ್ಸ್‌ನಲ್ಲಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
ವಿಜಯಪುರದಿಂದ ನಿಡಗುಂದಿ ಬಳಿಯ ಬೂದಿಹಾಳ ಯಲ್ಲಮ್ಮನ ಸನ್ನಿದಿಗೆ ದಂಪತಿ ಸಮೇತ ಹೊರಟಾಗ ಘಟನೆ ಸಂಭವಿಸಿದೆ.
ಕಾರಿನಲ್ಲಿಯೇ ಸಿಲುಕಿಕೊಂಡು ಒದ್ದಾಡುತ್ತಿದ್ದ ದಂಪತಿಯನ್ನು ರಾಷ್ಟ್ರೀಯ ಹೆದ್ದಾರಿ-50ರ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹೊರ ತೆಗೆದು ಉಪಚರಿಸಿದ್ದಾರೆ.
ಕೂಡಗಿ ಎನ್‌ಟಿಪಿಸಿ ಪೊಲೀಸರು ಮತ್ತು ಬಿಎಚ್‌ಟಿಪಿಎಲ್ ಸಿಬ್ಬಂದಿ ಘಟನಾ ಸ್ಥಳಕ್ಕಾಗಮಿಸಿ ಹೆದ್ದಾರಿಯಲ್ಲಿ 4 ಕಿ.ಮೀ. ದೂರದವರೆಗೂ ಸಾಲುಗಟ್ಟಿ ಗಂಟೆಗಟ್ಟಲೆ ನಿಂತಿದ್ದ ವಾಹನಗಳ ಸಂಚಾರ ವ್ಯವಸ್ಥೆ ಮಾಡಿದರು.