ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಶಾಸಕ ಸಿ.ಟಿ.ರವಿ ಕಾರು: ಇಬ್ಬರು ಸಾವು, ಹಲವರಿಗೆ ಗಾಯ

ತುಮಕೂರು: ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ಕುಣಿಗಲ್​ ತಾಲೂಕು ಆಲಪ್ಪನಗುಡ್ಡೆಯಲ್ಲಿ ನಡೆದಿದೆ.

ರಾಮನಗರ ಮೂಲದ ಸುನೀಲ್​ ಗೌಡ(26), ಶಶಿಕುಮಾರ್​ (28) ಮೃತ ದುರ್ದೈವಿಗಳು. ಇವರಿಬ್ಬರು ಸೇರಿ ಒಟ್ಟು 12 ಜನ ಎರಡು ಕಾರುಗಳಲ್ಲಿ ಶೃಂಗೇರಿ, ಹೊರನಾಡು ಸೇರಿ ಹಲವು ಪುಣ್ಯ ಕ್ಷೇತ್ರಗಳ ಪ್ರವಾಸ ಮುಗಿಸಿಕೊಂಡು ನಿನ್ನೆ ರಾತ್ರಿ ವಾಪಸ್​ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ರಾತ್ರಿ ತಮ್ಮ ಸ್ಕಾರ್ಪಿಯೋ, ಸ್ವಿಫ್ಟ್​ ಡಿಸೈರ್ ಕಾರನ್ನು ರಸ್ತೆ ಪಕ್ಕ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ಸಿ.ಟಿ.ರವಿಯವರ ಫಾರ್ಚುನರ್​ ಕಾರು ಈ ಎರಡೂ ಕಾರುಗಳಿಗೆ ಡಿಕ್ಕಿಯಾಗಿದೆ. ರವಿಯವರಿಗೆ ಕೂಡ ಗಾಯವಾಗಿದೆ. 12 ಜನರಲ್ಲಿ ಕೆಲವರಿಗೆ ಗಾಯಗಳಾಗಿದ್ದು ಅವರನ್ನೆಲ್ಲ ಸಿ.ಟಿ.ರವಿಯವರು ಕುಣಿಗಲ್​ ಆಸ್ಪತ್ರೆಗೆ ಸೇರಿಸಿದ್ದಾರೆ.

ಸದ್ಯ ಸಿ.ಟಿ.ರವಿ ಅವರು ಬೇರೊಂದು ವಾಹನದಲ್ಲಿ ತೆರಳಿ ಚಿಕಿತ್ಸೆ ಪಡೆದಿದ್ದು, ಅವರ ಫಾರ್ಚುನರ್​ ಕಾರನ್ನು ಕುಣಿಗಲ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.