ವ್ಯಾನ್ ಕಂದಕಕ್ಕೆ ಉರುಳಿ ಮಹಿಳೆ ಸಾವು

ಜಯಪುರ: ಕೊಪ್ಪ ತಾಲೂಕು ಜಯಪುರ ಸಮೀಪ ಮಳಿಗೆ ಗ್ರಾಮದ ಬಳಿ ಚಿಕ್ಕಮಗಳೂರು-ಕೊಪ್ಪ ರಸ್ತೆಯಲ್ಲಿ ಮಾರುತಿ ಇಕೋ ವಾಹನ ಗುರುವಾರ ಬೆಳಗ್ಗೆ ಸುಮಾರು 70 ಅಡಿ ಪ್ರಪಾತಕ್ಕೆ ಉರುಳಿ ಬಿದ್ದು, ಓರ್ವ ಮಹಿಳೆ ಮೃತಪಟ್ಟು ಎಂಟು ಜನ ಗಾಯಗೊಂಡಿದ್ದಾರೆ. ಇಬ್ಬರು ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ಇತರರನ್ನು ಕೊಪ್ಪ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರನ್ನು ಮೈಸೂರಿನ ಲೀಲಾವತಿ (54) ಎಂದು ಗುರುತಿಸಲಾಗಿದೆ. ಪದ್ಮಾವತಿ (50), ಸೌಮ್ಯಾ (30) , ರವಿ (34), ಉಮಾಶಂಕರ್ (40), ಸಿಂಚನಾ (12) ಕೃತಿಕಾ (11) ತನು (9) ತರುಣ್ ದೊರೆ (7) ಎಂಬುವರು ಗಾಯಗೊಂಡಿದ್ದಾರೆ.

ಶೃಂಗೇರಿ ಶಾರದಾ ಪೀಠದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಮೈಸೂರಿನಿಂದ ಆಗಮಿಸುತ್ತಿದ್ದ ಕುಟುಂಬ ಶೃಂಗೇರಿಗೆ ಹೋಗುವ ಬದಲು ದಾರಿ ತಪ್ಪಿ ಕೊಪ್ಪ ರಸ್ತೆಯಲ್ಲಿ ಪ್ರಯಾಣಿಸಿದ್ದು ಮಳಿಗೆಯ ಸಮೀಪ ರಸ್ತೆಯ ತಿರುವಿನಲ್ಲಿ ಗುರುವಾರ ಬೆಳಗ್ಗೆ 4.30ರ ಸಮಯದಲ್ಲಿ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ 70 ಅಡಿ ಪ್ರಪಾತಕ್ಕೆ ಬಿದ್ದಿದೆ.

ತೀವ್ರವಾಗಿ ಗಾಯಗೊಂಡಿದ್ದ ಲೀಲಾವತಿ (54) ಕೊಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪದ್ಮಾವತಿ ಮತ್ತು ಸೌಮ್ಯಾಅವರಿಗೆ ತೀವ್ರ ಪೆಟ್ಟು ಬಿದ್ದಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಣ್ಣಪುಟ್ಟ ಗಾಯಗಳಾಗಿರುವ ಇತರರನ್ನು ಕೊಪ್ಪ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರಾದ ಕೃಷ್ಣಪ್ಪ ಮತ್ತು ಅವರ ಪುತ್ರ ಗಾಯಾಳುಗಳನ್ನು ಕಂದಕದಿಂದ ಬಯಲು ಪ್ರದೇಶಕ್ಕೆ ತಂದು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸಲು ನೆರವಾದರು.

ತಾಯಿ ಸಾವು, ಪತ್ನಿ ಅತ್ತೆ ಗಂಭೀರ

ಮಗನಿಗೆ ಅಕ್ಷರಾಭ್ಯಾಸ ಮಾಡಿಸಲು ಶೃಂಗೇರಿಗೆ ಕುಟುಂಬದ ಸದಸ್ಯರೊಂದಿಗೆ ಆಗಮಿಸುತ್ತಿದ್ದ ಮೈಸೂರು ವಿದ್ಯಾರಣ್ಯಪುರದ ರವಿ ದುರಂತದಲ್ಲಿ ತನ್ನ ತಾಯಿ ಲೀಲಾವತಿ ಅವರನ್ನು ಕಳೆದುಕೊಂಡಿದ್ದಾರೆ. ಅತ್ತೆ ಪದ್ಮಾವತಿ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಪುತ್ರ ತರುಣ್ ದೊರೆಗೆ ಈಚೆಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು ಎನ್ನಲಾಗಿದ್ದು, ಶೃಂಗೇರಿ ಶಾರದೆಗೆ ಪೂಜೆ ಸಲ್ಲಿಸಿ ಮಗನಿಗೆ ಅಕ್ಷರ ಅಭ್ಯಾಸ ಮಾಡಿಸಿಕೊಂಡು ಬರಲು ಮೈಸೂರಿನಿಂದ ಹೊರಟಿದ್ದರು. ಪತ್ನಿ ಸೌಮ್ಯಾ, ಸಹೋದರಿ ಮಮತಾ, ಭಾವ ಉಮಾಶಂಕರ ಮತ್ತು ಸಹೋದರಿಯ ಮಕ್ಕಳೊಂದಿಗೆ ಶೃಂಗೇರಿಗೆ ಹೊರಟಿದ್ದರು. ಪತ್ನಿ ಮತ್ತು ಅತ್ತೆ ಇಬ್ಬರಿಗೂ ತೀವ್ರ ಪೆಟ್ಟು ಬಿದ್ದಿದ್ದು ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.