ದಾಖಲೆಯಿಲ್ಲದ 1 ಲಕ್ಷ ರೂ.ವಶಕ್ಕೆ

ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದ ಸಂಕೇಶ್ವರ ಕ್ರಾಸ್ ಬಳಿಯ ಚೆಕ್ ಪೋಸ್ಟ್‌ನಲ್ಲಿ ದಾಖಲೆಯಿಲ್ಲದೆ ದ್ವಿಚಕ್ರ ವಾಹನದಲ್ಲಿ ಸಾಗಣೆ ಮಾಡುತ್ತಿದ್ದ 1 ಲಕ್ಷ ರೂ.ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹಣ ಮಹಾದೇವ ಗೌರವಗೋಳ ಎಂಬ ವ್ಯಕ್ತಿಗೆ ಸೇರಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಹಣ ಭರತ ಫೈನಾನ್ಸ್‌ಗೆ ಸೇರಿದ್ದು, ಕರೋಶಿ ಗ್ರಾಮದಲ್ಲಿ ಸ್ವ-ಸಹಾಯ ಸಂಘಗಳಿಗೆ ನೀಡಿದ ಸಾಲದ ಮರುಪಾವತಿ ಮಾಡಿಕೊಂಡು ಸಂಘದ ಪ್ರತಿನಿಧಿ ಚಿಕ್ಕೋಡಿಗೆ ಆಗಮಿಸುತ್ತಿದ್ದ ವೇಳೆ ಚೆಕ್ ಪೋಸ್ಟ್ ಬಳಿ ತಪಾಸಣೆ ಸಂದರ್ಭ ಹಣ ಸಿಕ್ಕಿದೆ. ಆದರೆ, ಪ್ರತಿನಿಧಿ ಬಳಿ ಯಾವುದೇ ರೀತಿಯ ದಾಖಲೆ ಇಲ್ಲ ಎಂಬುದು ತಿಳಿದು ಬಂದಿದೆ.

ಚಿಕ್ಕೋಡಿ ಲೋಕಸಭಾ ಚುನಾವಣೆ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಚಿಕ್ಕೋಡಿ ತಹಸೀಲ್ದಾರ್ ಸಮ್ಮುಖದಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಹಣ ದೊರೆತಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.