ಹಾಸನ: ತಾಲೂಕಿನ ಶಾಂತಿಗ್ರಾಮ ಟೋಲ್‌ಗೇಟ್ ಬಳಿ ಕಳೆದ ಶುಕ್ರವಾರ ನಡೆದಿದ್ದ ರೌಡಿ ಶೀಟರ್ ಲೋಕೇಶ್ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಶಾಂತಿಗ್ರಾಮ ಠಾಣೆ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ.
ಹಾಸನದ ವಲ್ಲಭಾಯಿ ರಸ್ತೆ ನಿವಾಸಿ ಎಚ್.ಪಿ. ಭರತ್ (23), ಶ್ರೀದೇವಿ ನಗರ ನಿವಾಸಿ ಲೋಕೇಶ್ (25),
ಅಂಬೇಡ್ಕರ್ ನಗರದ ಕೆ.ವೈ. ಸುದೀಪ್ (20), ಹಾಸನಾಂಬ ದೇವಾಲಯ ಸಮೀಪದ ಅರ್ಜುನ್ (25) ಹಾಗೂ ನಿರ್ಮಲ ನಗರ ನಿವಾಸಿ ಜಯಂತ್ (21) ಬಂಧಿತರು.
ಘಟನೆ ಹಿನ್ನೆಲೆ: ಮೂರು ಕಳ್ಳತನ, ಸರಗಳ್ಳತನ ಸೇರಿ ಹತ್ತಾರು ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಪೆನ್ಶನ್ ಮೊಹಲ್ಲಾ ನಿವಾಸಿ, ರೌಡಿಶೀಟರ್ ಲೋಕೇಶ್ 25 ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತನ ಮೇಲೆ ದ್ವೇಷ ಹೊಂದಿದ್ದ ಐದು ಜನ ಸ್ನೇಹಿತರು, ಹತ್ಯೆ ಮಾಡಲು ಮೊದಲೇ ಸಂಚು ರೂಪಿಸಿದ್ದರು.
ಡಿ.27ರ ಮಧ್ಯಾಹ್ನ 12.30ಕ್ಕೆ ಆಟೋದಲ್ಲಿ ಆತನನ್ನು ಕೂರಿಸಿಕೊಂಡು ಶಾಂತಿಗ್ರಾಮ ಟೋಲ್‌ಗೇಟ್‌ವರೆಗೆ ಕರೆದುಕೊಂಡು ಹೋಗಿದ್ದರು. ಜಮೀನಿಗೆ ಹೋಗುವ ದಾರಿಯಲ್ಲಿರುವ ಹಲಸಿನ ಮರದ ಕೆಳಗೆ ನಿಲ್ಲಿಸಿ ಲೋಕೇಶ್‌ನೊಂದಿಗೆ ಜಗಳ ತೆಗೆದರು. ಆಟೋ ಸ್ಟಾರ್ಟ್ ಮಾಡುವ ಕಬ್ಬಿಣದ ರಾಚಿಟ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದರು.
ಪೊಲೀಸರಿಗೆ ಸಿಗದೆ ಪರಾರಿ: ಗಲಾಟೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಶಾಂತಿಗ್ರಾಮ ಠಾಣೆ ಪೊಲೀಸರನ್ನು ಐವರು ದಾರಿ ತಪ್ಪಿಸಿದ್ದರು. ಪೊಲೀಸ್ ವಾಹನಕ್ಕೆ ಆಟೋದಿಂದ ಡಿಕ್ಕಿ ಹೊಡೆಸಿದ್ದರು. ಮತ್ತೆ ಆಟೋ ಸ್ಟಾರ್ಟ್ ಆಗದ ಕಾರಣ ಅದನ್ನು ಅಲ್ಲಿಯೇ ಬಿಟ್ಟು ದಿಕ್ಕಾಪಾಲಾಗಿ ಓಡಿದ್ದರು. ಎಲ್ಲರ ಮುಖ ಗುರುತು ಇಟ್ಟುಕೊಂಡಿದ್ದ ಪೊಲೀಸರು ಮಂಗಳವಾರ ಸಂಜೆ 7 ಗಂಟೆಗೆ ಸಂತೆಪೇಟೆಯ ಉಷಾ ವೈನ್ಸ್ ಹಿಂಭಾಗದ ಸಂತೆ ಮೈದಾನದಲ್ಲಿ ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿಪಿಐ ಸತ್ಯ ನಾರಾಯಣ, ಎಸ್‌ಐ ಎಸ್.ಕೆ. ಕೃಷ್ಣ, ಸುಬ್ರಹ್ಮಣ್ಯ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕೇಶ್ ವಿನಾಕಾರಣ ಹೊಡೆಯುತ್ತಿದ್ದ: ಆಟೋ ಚಾಲನೆ ಮಾಡಿಕೊಂಡಿದ್ದ ಲೋಕೇಶ್ ಸಹಚರರನ್ನು ವಿನಾಕಾರಣ ಹೊಡೆಯುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾತ್ರವಲ್ಲದೆ ಕೊಲೆ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಕೊಲೆ ಮಾಡಿದ್ದೇವೆ ಎಂದು ಬಂಧಿತರು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.