ಬೆಂಗಳೂರು: ನಕಲಿ ಕಂಪನಿ ಮತ್ತು ಗ್ರಾಹಕರನ್ನು ಸೃಷ್ಟಿಸಿ ಇ-ಕಾಮರ್ಸ್ ಮೀಶೋ ಕಂಪನಿಗೆ 5.50 ಕೋಟಿ ರೂ. ವಂಚಿಸಿದ್ದ ಗುಜರಾತಿನ ಮೂವರನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ತಿನ ಸೂರತ್‌ನಗರ ನಿವಾಸಿಗಳಾದ ಉತ್ತಮ್ ಕುಮಾರ್, ಪಾರ್ಥ್ ಭಾಯ್ ಮತ್ತು ಮೌಲಿಕ್ ಹರಿಭಾಯಿ ಬಂಧಿತರು. ಮತ್ತೆ ಮೂವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಇ-ಕಾಮರ್ಸ್ ಉದ್ಯಮವಾಗಿರುವ ಮೀಶೋ ಕಂಪನಿ ಜತೆಗೆ ವಿವಿಧ ಮಾರಾಟಗಾರರು ಒಪ್ಪಂದ ಮಾಡಿಕೊಂಡು ಮೀಶೋ ತನ್ನ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ. ಆ ವಸ್ತುಗಳನ್ನು ಗ್ರಾಹಕರು ಬುಕ್ ಮಾಡಿದಾಗ ಅವರ ವಿಳಾಸಕ್ಕೆ ಪಾರ್ಸೆಲ್ ಕೊಟ್ಟು ಆನ್‌ಲೈನ್ ಅಥವಾ ನಗದು ರೂಪದಲ್ಲಿ ಹಣ ಸ್ವೀಕರಿಸಲಾಗುತ್ತದೆ.
ಅದೇ ರೀತಿಯಾಗಿ ಮೀಶೋ ಜತೆಗೆ ಆರೋಪಿಗಳು, ಓಂ ಸಾಯಿ ್ಯಾಷನ್ ಎಂಬ ನಕಲಿ ಕಂಪನಿ ಹೆಸರಿನಲ್ಲಿ ಜನವರಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಮೀಶೋ ಪ್ಲಾಟ್‌ಾರ್ಮ್‌ನಲ್ಲಿ ವಿವಿಧ ಬಗೆಯ ವಸ್ತುಗಳನ್ನು ಮಾರಾಟಕ್ಕಿಟ್ಟು ಆರೋಪಿಗಳೇ ಗ್ರಾಹಕರ ಸೋಗಿನಲ್ಲಿ ಮೀಶೋ ಆ್ಯಪ್‌ನಲ್ಲಿ ವಸ್ತುಗಳನ್ನು ಖರೀದಿಸಿ ತಪ್ಪು, ಸುಳ್ಳು ವಿಳಾಸ ಕೊಡುತ್ತಿದ್ದರು.
ಇದೆ ರೀತಿ ಪ್ರತಿ ದಿನ 2 ರಿಂದ ಎರಡೂವರೆ ಸಾವಿರ ವಸ್ತುಗಳನ್ನು ಖರೀದಿಸುತ್ತಿದ್ದರು. ಗ್ರಾಹಕರ ಸುಳ್ಳು, ತಪ್ಪು ವಿಳಾಸ ಕೊಟ್ಟಿದ್ದರಿಂದ ಪಾರ್ಸೆಲ್‌ಗಳು ವಾಪಸ್ ಓಂ ಸಾಯಿ ್ಯಾಷನ್ ಕಂಪನಿಗೆ ಬರುತ್ತಿದ್ದವು. ವಾಪಸ್ ಬಂದ ಪಾರ್ಸೆಲ್‌ನಲ್ಲಿ ಇರುವ ವಸ್ತುಗಳನ್ನು ಬದಲಾಯಿಸಿ ಅದರಲ್ಲಿ ನಕಲಿ ಅಥವಾ ಕಡಿಮೆ ಬೆಲೆಯ ವಸ್ತುಗಳನ್ನು ಇಡುತ್ತಿದ್ದರು.
ಇದಾದ ಮೇಲೆ ವಾಪಸ್ ಬಂದಿರುವ ಪಾರ್ಸೆಲ್‌ನ್ನು ಓಪನ್ ಮಾಡಿದಂತೆ ಮಾಡಿ ವಿಡಿಯೋ ಮಾಡಿಕೊಂಡು ಹಿಂತಿರುಗಿರುವ ಪಾರ್ಸೆಲ್‌ನಲ್ಲಿ ನಕಲಿ ಅಥವಾ ಕಡಿಮೆ ಬೆಲೆ ವಸ್ತುಗಳನ್ನು ಬಂದಿವೆ ಎಂದು ಆ ವಿಡಿಯೋವನ್ನು ಮೀಶೋ ಕಂಪನಿಗೆ ಕಳುಹಿಸುತ್ತಿದ್ದರು.
ಉತ್ಪನ್ನಗಳ ಮೌಲ್ಯದ ಹಣವನ್ನು ಮೀಶೋ ಕಂಪನಿ ನೇರವಾಗಿ ಆರೋಪಿಗಳ ಓಂ ಸಾಯಿ ್ಯಾಷನ್ ಕಂಪನಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿತ್ತು. ಇದೇ ರೀತಿಯಾಗಿ ಜನವರಿಯಿಂದ ಜುಲೈ ವರೆಗೂ 5.50 ಕೋಟಿ ರೂ. ಅನ್ನು ವಂಚನೆ ಮಾಡಿದ್ದರು. ನಿರಂತರವಾಗಿ ನಷ್ಟ ಆಗುತ್ತಿರುವ ಬಗ್ಗೆ ಅನುಮಾನ ಬಂದು ಮೀಶೋ ಕಂಪನಿ ನೋಡಲ್ ಅಧಿಕಾರಿ, ಸಿಸಿಬಿ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿಗಳು ಬಲೆಗೆ ಸೆರೆಸಿಕ್ಕಿದ್ದಾರೆ ಎಂದು ಬಿ. ದಯಾನಂದ್ ತಿಳಿಸಿದ್ದಾರೆ.
25 ಲಕ್ಷ ರೂ. ಜಪ್ತಿ:
2023ರಲ್ಲಿ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಯೂ ಇದೇ ಆರೋಪಿಗಳು ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಂಧಿತರಿಂದ 25 ಲಕ್ಷ ರೂ. ನಗದು ಜಪ್ತಿ ಮಾಡಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಳಿವು ಕೊಟ್ಟ ಆನ್‌ಲೈನ್ ಪೇಮೆಂಟ್ :
ನಕಲಿ ಕಂಪನಿ ಮತ್ತು ಗ್ರಾಹಕರನ್ನು ಸೃಷ್ಟಿಸಿ ಕಳ್ಳಾಟದಲ್ಲಿ ತೊಡಗಿದ್ದ ಆರೋಪಿಗಳ ಬ್ಯಾಂಕ್ ಖಾತೆಗೆ ಮೀಶೋ ಕಂಪನಿಯಿಂದ ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಆಗುತ್ತಿತ್ತು. ವಸ್ತುಗಳ ಖರೀದಿಗೆ ಬಳಸುತ್ತಿದ್ದ ಮೊಬೈಲ್ ನಂಬರ್‌ಗಳ ಜಾಡನ್ನು ಸೈಬರ್ ಕ್ರೈಂ ಪೊಲೀಸರು ಬೆನ್ನತ್ತಿದ್ದರು. ಕೊನೆಗೆ ಗುಜರಾತ್‌ನ ಸೂರತ್‌ನಗರಕ್ಕೆ ಬ್ಯಾಂಕ್ ಖಾತೆ ಮತ್ತು ಮೊಬೈಲ್ ನಂಬರ್ ಲಿಂಕ್ ಹೋಗಿದ್ದು, ಸಿಸಿಬಿ ವಿಶೇಷ ತಂಡ ಸೂರತ್‌ನಗರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.