ಗೌತಮ್​ ಗಂಭೀರ್​ ವಿರುದ್ಧದ ಆಪ್​ ಅಭ್ಯರ್ಥಿ ಅತಿಶಿ ಆರೋಪಕ್ಕೆ ಹರ್ಭಜನ್​ ಸಿಂಗ್​ ಹೇಳಿದ್ದೇನು?

ನವದೆಹಲಿ: ಪೂರ್ವದೆಹಲಿ ಆಪ್​ ಅಭ್ಯರ್ಥಿ ಅತಿಶಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಅಭ್ಯರ್ಥಿ ಗೌತಮ್​ ಗಂಭೀರ್​ ವಿರುದ್ಧ ಆರೋಪ ಮಾಡಿದ್ದರು. ಗೌತಮ್​ ಗಂಭೀರ್​ ತನ್ನ ಬಗ್ಗೆ ಅಶ್ಲೀಲ, ಅವಹೇಳನಕಾರಿಯಾಗಿ ಬರೆದ ಕರಪತ್ರಗಳನ್ನು ಮುದ್ರಿಸಿ ವಿತರಣೆ ಮಾಡಿಸುತ್ತಿದ್ದಾರೆ. ಈ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅತ್ತಿದ್ದರು.

ಈ ಆರೋಪವನ್ನು ಗಂಭೀರ್ ಅಲ್ಲಗಳೆದಿದ್ದರು. ನಾನು ಹೀಗೆಲ್ಲ ಮಾಡಿದ್ದು ಸಾಬೀತಾದರೆ ನನ್ನ ನಾಮಪತ್ರ ಹಿಂತೆಗೆದುಕೊಳ್ಳುತ್ತೇನೆ ಎಂದಿದ್ದರು. ಅಲ್ಲದೆ,ಇದೆಲ್ಲ ಆಪ್​ ಮುಖ್ಯಸ್ಥ ಅರವಿಂದ ಕೇಜ್ರಿವಾಲ್​ ಕುತಂತ್ರ ಎಂದು ಆರೋಪಿಸಿದ್ದರು.

ಈಗ ಗೌತಮ್​ ಗಂಭೀರ್​ ವಿರುದ್ಧದ ಆರೋಪವನ್ನು ಭಾರತೀಯ ಕ್ರಿಕೆಟ್​ ತಂಡದ ಆಟಗಾರ ಹರ್ಭಜನ್​ ಸಿಂಗ್​ ಕೂಡ ಅಲ್ಲಗಳೆದಿದ್ದಾರೆ.

ನಾನು ಗಂಭೀರ್​ ವಿರುದ್ಧದ ಆರೋಪ ನೋಡಿ ಶಾಕ್​ಗೆ ಒಳಗಾಗಿದ್ದೇನೆ. ನನಗೆ ಗೌತಮ್​ ಗಂಭೀರ್​ ಬಗ್ಗೆ ತುಂಬ ಚೆನ್ನಾಗಿ ಗೊತ್ತು. ಅವರು ಯಾವತ್ತೂ ಯಾವ ಮಹಿಳೆಯ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಚುನಾವಣೆಯಲ್ಲಿ ಸೋಲುತ್ತಾರೋ, ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಇಂಥ ಕೆಳಮಟ್ಟಕ್ಕೆಲ್ಲ ಇಳಿಯುವುದಿಲ್ಲ ಎಂದು ಗೆಳೆಯನ ಪರ ಟ್ವೀಟ್​ ಮಾಡಿದ್ದಾರೆ.