ಮೊದಲು ಅಥ್ಲೆಟಿಕ್ಸ್​ ಸಾಧನೆ ಮೇಲೆ ಗಮನ ಇಡಲಿ, ಬಳಿಕ ಸಲಿಂಗ ಪ್ರೇಮದ ಬಗ್ಗೆ ಆಲೋಚಿಸು: ಅಖೋಜಿ ಚಂದ್​ ಸಲಹೆ

ನವದೆಹಲಿ:  ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಲೆಂದು ಸರ್ಕಾರ ಸಾಕಷ್ಟು ಸಹಾಯ ಮಾಡುತ್ತಿದೆ. ಇದನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡುವತ್ತ ಗಮನ ಕೊಡಲಿ. ಬಳಿಕ ಸಲಿಂಗ​ ಪ್ರೇಮದ ಬಗ್ಗೆ ಆಲೋಚಿಸಲಿ ಎಂದು ಅಂತಾರಾಷ್ಟ್ರೀಯ ಅಥ್ಲೀಟ್​ ಧ್ಯುತಿ ಚಂದ್​ ಅವರ ತಾಯಿ ಅಖೋಜಿ ಚಂದ್​ ತಮ್ಮ ಪುತ್ರಿಗೆ ಸಲಹೆ ನೀಡಿದ್ದಾರೆ.

ಏಷ್ಯನ್​ ಗೇಮ್ಸ್​ನಲ್ಲಿ ಪದಕ ಸಾಧನೆ ಮಾಡಿರುವ ಧ್ಯುತಿ ಚಂದ್​ ತಮ್ಮ ಸಂಬಂಧಿಯೊಂದಿಗಿನ ಸಲಿಂಗ ಪ್ರೇಮದ ಬಗ್ಗೆ ಭಾನುವಾರ ಬಹಿರಂಗಪಡಿಸಿದ್ದರು. ತಮ್ಮ ಸಲಿಂಗ ಪ್ರೇಮದ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡ ಭಾರತದ ಮೊದಲ ಅಥ್ಲೀಟ್​ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. ಇವರ ಸಲಿಂಗ ಪ್ರೇಮದ ಬಗ್ಗೆ ಅವರ ಕುಟುಂಬದವರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಭಾನುವಾರ ವಿಷಯ ಬಹಿರಂಗವಾದ ಬಳಿಕ ಪ್ರತಿಕ್ರಿಯಿಸಿದ್ದ ಧ್ಯುತಿ ಅವರ ಅಕ್ಕ ಸರಸ್ವತಿ ಚಂದ್​, ತಮ್ಮ ಸಹೋದರಿಯನ್ನು ಯಾರೋ ಬ್ಲ್ಯಾಕ್​ಮೇಲ್​ ಮಾಡುತ್ತಿರುವುದಾಗಿಯೂ, ಸಲಿಂಗ ಪ್ರೇಮವನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿರುವುದಾಗಿಯೂ ಆರೋಪಿಸಿದ್ದರು. ಇದೀಗ ಅವರ ತಾಯಿ ಅಖೋಜಿ, ಧ್ಯುತಿ ಅವರ ಸಲಿಂಗ ಪ್ರೇಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಧ್ಯುತಿ ನನ್ನ ಸಹೋದರ ಸಂಬಂಧಿಯ ಪುತ್ರಿಯನ್ನು ವಿವಾಹವಾಗಲು ಬಯಸಿದ್ದಾಳೆ. ಈ ಸಂಬಂಧದಲ್ಲಿ ಆಕೆ ನನಗೆ ಮೊಮ್ಮಗಳಾಗುತ್ತಾಳೆ. ಅಂದರೆ, ಆ ಹುಡುಗಿಗೆ ಧ್ಯುತಿ ತಾಯಿ ಸಮನಾಗುತ್ತಾಳೆ. ಇಂತಹ ಸಂಬಂಧವನ್ನು ನಮ್ಮ ಸಮಾಜ ಒಪ್ಪಲಾದರೂ ಹೇಗೆ ಸಾಧ್ಯ ಎಂದು ಅಖೋಜಿ ಪ್ರಶ್ನಿಸಿದ್ದಾರೆ.

ಈ ಸಂಬಂಧ ಹೊಂದಲು ಕೋರ್ಟ್​ ಆದೇಶವಿದೆ. ಅಥ್ಲೀಟ್​ ಆಗಿ ತನ್ನ ವೃತ್ತಿಜೀವನ ರೂಪಿಸಿಕೊಳ್ಳಲು ಸಹಾಯ ಮಾಡಿದವರ ಸಹಕಾರವೂ ಇದಕ್ಕಿದೆ ಎಂದು ಆಕೆ ಹೇಳಿದಳು. ಅದು ಯಾರೆಂದು ತಿಳಿಸು. ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದಕ್ಕೆ ಆಕೆ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ನಾನು ಹೇಳುವುದೇನೆಂದರೆ. ಅಥ್ಲೆಟಿಕ್ಸ್​ ರಂಗದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಧ್ಯುತಿಗೆ ಸರ್ಕಾರ ಸಾಕಷ್ಟು ಸಹಾಯ ಮಾಡುತ್ತಿದೆ. ಆದ್ದರಿಂದ, ಇನ್ನುಳಿದ ವಿಷಯಗಳೆಲ್ಲವನ್ನೂ ಬಿಟ್ಟು, ಅಥ್ಲೆಟಿಕ್ಸ್​ ರಂಗದಲ್ಲಿ ಉತ್ತಮ ಸಾಧನೆ ಮಾಡುವ ಬಗ್ಗೆ ಧ್ಯುತಿ ಗಮನಹರಿಸಲಿ. ನನ್ನ ಮತ್ತು ಆಕೆಯ ಅಪ್ಪನ ಗೌರವವನ್ನು ಎತ್ತಿ ಹಿಡಿಯದಿದ್ದರೂ ದೇಶದ ಹೆಸರನ್ನು ಎತ್ತಿಹಿಡಿಯಲಿ ಎಂದು ಹಾರೈಸಿದ್ದಾರೆ.

ಆಸ್ತಿ, ಹಣ ಲಪಟಾಯಿಸುವ ಪಿತೂರಿ ಇರಬಹುದು
ಧ್ಯುತಿ ಚಂದ್​ ಅವರ ಸಲಿಂಗ ಪ್ರೇಮದ ಬಗ್ಗೆ ಪ್ರತಿಕ್ರಿಯಿಸಿದ ಧ್ಯುತಿ ಅವರ ನೆರೆಮನೆಯ ಅನಂತಾ ಚರಣ್​ ದಾಸ್​, ಸಲಿಂಗ ಪ್ರೇಮ ಆಕೆಯ ವೈಯಕ್ತಿಕ ವಿಷಯ. ಸಲಿಂಗ ವಿವಾಹ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿರಬಹುದು. ಹಾಗಾಗಿ, ಕಾನೂನಿನ ಪ್ರಕಾರ ಆಕೆ ಮದುವೆಯಾಗಲೂ ಬಹುದು. ಆದರೆ, ಗ್ರಾಮಸ್ಥರು ಅದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಧ್ಯುತಿ ವಿರುದ್ಧ ಏನಾದರೂ ಪಿತೂರಿ ನಡೆಯುತ್ತಿರಬಹುದೇ ಎಂಬ ಪ್ರಶ್ನೆಗೆ, ಆಕೆ ಸಾಕಷ್ಟು ಆಸ್ತಿ ಮತ್ತು ಹಣವನ್ನು ಮಾಡಿದ್ದಾಳೆ. ಇದನ್ನು ಲಪಟಾಯಿಸಲು ಕೆಲವರು ಸಂಚು ರೂಪಿಸಿ, ಪಿತೂರಿ ನಡೆಸುತ್ತಿರಬಹುದು. ಆಕೆಗೆ ಆಗದವರು ಇದಕ್ಕೆ ಇಂಬು ನೀಡುತ್ತಿರಬಹುದು. ಸದ್ಯಕ್ಕೆ ಈ ವಿವಾದಗಳನ್ನು ಬದಿಗಿಟ್ಟು, ಉತ್ತಮ ಸಾಧನೆ ಮಾಡುವತ್ತ ಆಕೆ ಗಮನಹರಿಸಬೇಕು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)