ಆದಷ್ಟು ಬೇಗ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು: ದಿನೇಶ್​ ಗುಂಡೂರಾವ್​

ಬೆಂಗಳೂರು: ಚುನಾವಣಾ ತಯಾರಿ, ಪ್ರಚಾರ, ಪಕ್ಷ ಸಂಘಟನೆ ಬಗ್ಗೆ ಚರ್ಚೆಯಾಗಿದ್ದು, ಆದಷ್ಟು ಬೇಗ ಅಭ್ಯರ್ಥಿಗಳ ಆಯ್ಕೆ ಮತ್ತು ಘೋಷಣೆ ಮಾಡಬೇಕೆಂದು ಚರ್ಚಿಸಿದೆವು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಕಾಂಗ್ರೆಸ್ ಚುನಾವಣಾ ಸಮಿತಿ‌ ಸಭೆಯಲ್ಲಿ ಹಿರಿಯ ನಾಯಕರೂ ಸೇರಿ ಬಹಳಷ್ಟು ವಿಚಾರಗಳ ಚರ್ಚೆ ನಡೆಯಿತು. ಲೋಕಸಭೆಗೆ ಶೀಘ್ರದಲ್ಲಿ ಅಭ್ಯರ್ಥಿಗಳ ಘೋಷಣೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಜೆಡಿಎಸ್‌ಗೆ ಕ್ಷೇತ್ರಗಳ ಹಂಚಿಕೆ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಬಗ್ಗೆ ಪ್ರಮುಖ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಚರ್ಚೆ ಮಾಡಿ ಹೈಕಮಾಂಡ್‌ಗೆ ವರದಿ ಸಲ್ಲಿಸುತ್ತೇವೆ. ಚುನಾವಣಾ ಸಮಿತಿ ಮೊದಲು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಕೂಡ ನಡೆದಿದೆ. ಪ್ರಚಾರ ಸಮಿತಿ ಸಭೆ ಕೂಡ ನಡೆಸಿದ್ದೇವೆ ಎಂದರು.

ಕೋಟ್ಯಂತರ ರೂ. ಖರ್ಚು ಮಾಡಿ ಬಿಜೆಪಿ ಪ್ರಚಾರ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಪ್ರಚಾರದಲ್ಲಿ ಹಿಂದೆ ಬೀಳಬಾರದು ಎಂದು ನಿರ್ಧರಿಸಲಾಗಿದೆ. ಬಿಜೆಪಿ ಅಪಪ್ರಚಾರಗಳನ್ನು ನಡೆಸುತ್ತಿದೆ. ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಸಮ್ಮಿಶ್ರ ಸರಕಾರಕ್ಕೆ ಗೊಂದಲ ಹುಟ್ಟಿಸುವ ಹೇಳಿಕೆ ಕೊಡದಂತೆ ನಮ್ಮ ಮುಖಂಡರಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು.

ಬಿಜೆಪಿಗರ ಭಾವನಾತ್ಮಕ ಹೇಳಿಕೆಗಳು ಹಾಗೂ ಜನರನ್ನು ಹಾದಿ ತಪ್ಪಿಸೋ ಬಿಜೆಪಿ ಮುಖಂಡರ ಹೇಳಿಕೆ ವಿರುದ್ಧ ಕಾಂಗ್ರೆಸ್ ಮುಖಂಡರು ಮಾತನಾಡಬೇಕು. ಜನರಿಗೆ ಬಿಜೆಪಿ ಮುಖವಾಡವೇನು ಎನ್ನುವುದರ ಬಗ್ಗೆ ಹೇಳಬೇಕಿದೆ. ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಮೊನ್ನೆ ನಡೆದ ಘಟನೆಗಳನ್ನೇ ಭಾವನಾತ್ಮಕವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ರಾಜ್ಯದಲ್ಲಿ ಬಿಜೆಪಿ ನಾಯಕರಿಗೆ ಯಾವ ರೀತಿ ಟಾಂಗ್​ ಕೊಡಬೇಕು ಎನ್ನುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ​ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ಎಚ್.ಕೆ.ಪಾಟೀಲ್, ಸಾಕೇತ್ ಸೈಲೇಜ್ ನಾಥ್, ವಿಷ್ಣು ನಾಧನ್, ರೆಹಮಾನ್ ಖಾನ್, ಡಿ ಕೆ ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. (ದಿಗ್ವಿಜಯ ನ್ಯೂಸ್)