ಹೆಚ್ಚು ಅಂತರದಿಂದ ಗೆದ್ದವರ ಕೊಡುಗೆ ಏನು?

ಎನ್.ಆರ್.ಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ 1.80 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪ್ರಶ್ನಿಸಿದರು.

ಪ್ರಚಾರದ ಸಂದರ್ಭ ತಾಲೂಕಿನ ಬಿ.ಎಚ್.ಕೈಮರದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲುವವರೆಗೆ ನಿಮ್ಮೆಲ್ಲರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಹೇಳಿ, ಗೆದ್ದ ನಂತರ ಪಕ್ಷದ ರಾಜ್ಯದ ಜವಾಬ್ದಾರಿಯಿದೆ ಎಂದು ಕ್ಷೇತ್ರವನ್ನು ಕಡಗಣಿಸಿದ್ದಾರೆ ಎಂದು ದೂರಿದರು.

ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ವಿಷಯ ಬಂದಾಗ ಚಕಾರ ಎತ್ತದ ಶೋಭಾ ಅವರು ಇದೀಗ ಮತ್ತೆ ಬಂದು ಮತ ಕೇಳುತ್ತಿರುವುದು ಹಾಸ್ಯಾಸ್ಪದ. ಕಸ್ತೂರಿರಂಗನ್ ವರದಿ ಬಗ್ಗೆ ರ್ಚಚಿಸಲು ಸಭೆ ಕರೆದಾಗಲೂ ಸಭೆಗೆ ಗೈರಾಗಿ ರೈತರ ಜೀವನದ ಜತೆ ಚೆಲ್ಲಾಟವಾಡಿದ್ದಾರೆ. ಕೆಲಸ ಮಾಡದ ಸಂಸದೆ ಬೇಕೋ,ನಿಮ್ಮೆಲ್ಲರ ಕೆಲಸ ಮಾಡುವ ಸಂಸದ ಬೇಕೋ ಎಂದು ಜನರೇ ತೀರ್ವನಿಸಬೇಕು ಎಂದರು.

ಎಂಎಡಿಬಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ ಯಾವುದೇ ಭರವಸೆ ಈಡೇರಿಲ್ಲ. ರೈತರನ್ನು, ಕೂಲಿ ಕಾರ್ವಿುಕರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಜ್ಞಾವಂತ ಮತದಾರರು ಈ ಬಾರಿಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರನ್ನು ಚುನಾಯಿಸಬೇಕು ಎಂದು ಮನವಿ ಮಾಡಿದರು.