ವಿಶ್ರಾಂತಿ ಪಡೆಯದ ಅಭ್ಯರ್ಥಿಗಳು

<<ಇತರ ಕ್ಷೇತ್ರಗಳ ಪ್ರಚಾರದಲ್ಲಿ ಭಾಗಿ * ಪ್ರಮೋದ್ ಬೈಂದೂರು, ಶೋಭಾ ಚಿಕ್ಕೋಡಿಯಲ್ಲಿ ಪ್ರಚಾರ>>

ವಿಜಯವಾಣಿ ಸುದ್ದಿಜಾಲ ಉಡುಪಿ
ಒಂದು ತಿಂಗಳಿನಿಂದ ಚುನಾವಣೆ ಕಾರ್ಯದಲ್ಲಿ ಹಗಲು ರಾತ್ರಿ ತೊಡಗಿಸಿಕೊಂಡಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳು ಮತದಾನ ಮುಗಿದರೂ ವಿಶ್ರಾಂತಿ ಪಡೆದಿಲ್ಲ. ಪಕ್ಷದ ಪರವಾಗಿ ಇತರ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹೊರಟಿದ್ದಾರೆ.

ಶೋಭಾ ಚಿಕ್ಕೋಡಿಗೆ: ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಗುರುವಾರ ಮತದಾನ ಮಾಡಲು ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ರಾತ್ರಿ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಲ್ಲಿಂದ ಚಿಕ್ಕೋಡಿಗೆ ತೆರಳಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
‘ನನ್ನ ಕ್ಷೇತ್ರದ ಮತದಾನವಾಗಿದೆ ಎಂದು ವಿಶ್ರಾಂತಿ ಪಡೆದುಕೊಳ್ಳುತ್ತಿಲ್ಲ. ಪಕ್ಷ ಸಾಕಷ್ಟು ಜವಾಬ್ದಾರಿ ನೀಡಿದೆ, ಚಿಕ್ಕೋಡಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ಚುನಾವಣೆಗಿಂತ ಈ ಸಲ ಹೆಚ್ಚು ಲೀಡ್‌ನಲ್ಲಿ ಗೆಲುವು ಪಡೆಯಲಿದ್ದೇನೆ’ ಎಂದು ಶೋಭಾ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಮೋದ್ ಬೈಂದೂರಿಗೆ: ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಶುಕ್ರವಾರ ಪತ್ರಿಕೆಗಳನ್ನು ಓದಿದ ಬಳಿಕ, ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಕೃತಜ್ಞತೆ ಸಲ್ಲಿಸಿದರು. ಮಧ್ಯಾಹ್ನ ಬಳಿಕ ಬೈಂದೂರು ಕ್ಷೇತ್ರಕ್ಕೆ ತೆರಳಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರದಲ್ಲಿ ತೊಡಗಿಸಿಕೊಂಡರು. ಹೋಗುವಾಗ ಸಾಲಿಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಮಂಟಪ ಹೋಟೆಲ್‌ನಲ್ಲಿ ತಿಂಡಿ, ಜ್ಯೂಸ್ ಕುಡಿಯುತ್ತ ಮಾತುಕತೆ ನಡೆಸಿದರು. ಬಳಿಕ ಆನೆಗುಡ್ಡೆ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

‘ನಿರಂತರವಾಗಿ ಚುನಾವಣೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ. ಇವತ್ತು ಕಾರ್ಯಕರ್ತರಿಗೆ, ನಾಯಕರಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದೆ. ಜನ ಬದಲಾವಣೆ ಬಯಸಿದ್ದಾರೆ, ಗೆಲುವಿನ ವಿಶ್ವಾಸದಲ್ಲಿದ್ದೇನೆ’ ಎಂದು ಪ್ರಮೋದ್ ಪ್ರತಿಕ್ರಿಯಿಸಿದ್ದಾರೆ.

140 ಮಂದಿ ಬೈಂದೂರಿಗೆ: ದಕ್ಷಿಣ ಕನ್ನಡದಲ್ಲಿ ಗುರುವಾರ ತನಕವೂ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ಮಾಜಿ ಶಾಸಕರು, ಸ್ಥಳೀಯಾಡಳಿತ ಸಂಸ್ಥೆ ಸದಸ್ಯರು, ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳ ಸುಮಾರು 140 ಮಂದಿಯ ತಂಡ ಏ.23 ರಂದು ಮತದಾನ ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಿನಲ್ಲಿ ಪ್ರಚಾರ ಕಾರ‌್ಯದಲ್ಲಿ ತೊಡಗಲು ತೆರಳಿದ್ದಾರೆ. ಜೆ.ಆರ್.ಲೋಬೊ, ಶಕುಂತಳಾ ಶೆಟ್ಟಿ, ಬಿ.ಎ.ಮೊದಿನ್ ಬಾವ, ಕೃಪಾ ಆಳ್ವ ಮುಂತಾದವರು ಈ ತಂಡದಲ್ಲಿದ್ದಾರೆ.