ಜಾಗೃತಿ ಮೂಡಿಸಿ ಕ್ಯಾನ್ಸರ್ ತಡೆಗಟ್ಟಿ

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸಲಹೆ*ಶ್ವಾಸಕೋಶ ಕ್ಯಾನ್ಸರ್ ಅರಿವು ಕಾರ್ಯಕ್ರಮ

ಮೈಸೂರು: ಜಾಗೃತಿ ಜ್ಯೋತಿ ಮೂಲಕ ಕ್ಯಾನ್ಸರ್ ರೋಗ ಹರಡದಂತೆ ತಡೆಯಬಹುದಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.

ವಿಶ್ವ ಶ್ವಾಸಕೋಶ ಕ್ಯಾನ್ಸರ್ ಅರಿವಿನ ಮಾಸದ ಅಂಗವಾಗಿ ಕರ್ನಾಟಕ ಕಿಡ್ನಿ ಆರೋಗ್ಯ ಪ್ರತಿಷ್ಠಾನ ವತಿಯಿಂದ ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಶ್ವಾಸಕೋಶ ಕ್ಯಾನ್ಸರ್ ಅರಿವು, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ವಾಸಕೋಶದ ಕ್ಯಾನ್ಸರ್ ಗಾಳಿಯ ಮೂಲಕ ಹರಡುತ್ತದೆ. ದೇಶದ ಶೇ.72ರಷ್ಟು ಜನಸಂಖ್ಯೆ ಶ್ವಾಸಕೋಸದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ರೋಗದ ಕುರಿತು ಜಾಗೃತಿಯ ಕೊರತೆ. ಸಿಗರೇಟ್ ಸೇದುವವರಿಗೆ ಮಾತ್ರ ಕ್ಯಾನ್ಸರ್ ಬರಲ್ಲ. ಸಿಗರೇಟ್ ಹೊಗೆಯನ್ನು ಸೇವಿಸುವುದರಿಂದಲೂ ಶ್ವಾಸಕೋಶದ ಸಮಸ್ಯೆ ಬರಲಿದೆ ಎಂದರು.

ಕ್ಯಾನ್ಸರ್ ರೋಗ ನಿವಾರಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ತಾವು ನಡೆಸಿದ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಸಂಶೋಧನೆ ಪ್ರಾಯೋಗಿಕವಾಗಿ ಅನುಷ್ಠಾನವಾಗುವುದು ಬಾಕಿ ಇದೆ. ಇದಕ್ಕಾಗಿ ಕೆಲ ತಾಂತ್ರಿಕ ಹಂತಗಳನ್ನು ದಾಟಿ ಮುಂದೆ ಸಾಗಬೇಕಿದೆ. ಶೀಘ್ರದಲ್ಲೇ ನಾವು ಈ ಪ್ರಕ್ರಿಯೆಯನ್ನು ಪೂರೈಸಿ ಸಂಶೋಧನೆಯ ಫಲ ಕ್ಯಾನ್ಸರ್ ರೋಗಿಗಳಿಗೆ ದೊರೆಯುವಂತೆ ಮಾಡಲಾಗುವುದು ಎಂದರು.

ಪ್ರಾಂಶುಪಾಲ ಡಾ.ಎಂ.ಮಹದೇವಯ್ಯ ಮಾತನಾಡಿ, ಗುಟ್ಖಾ, ಸಿಗರೇಟ್, ಮದ್ಯಪಾನ ಚಟಗಳು ಯುವ ಜನರ ಪಾಲಿಗೆ ಶೋಕಿ, ಮೋಜು ಮಸ್ತಿಯ ಸಂಕೇತವಾಗಿದೆ. ಇವುಗಳಿಗೆ ದಾಸರಾಗಿ ಅವರು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವ ಲೇಖಕಿ ಶ್ರುತಿ ಮಾತನಾಡಿ, ಇದು ಉತ್ತಮ ಕೃತಿ. ಭಾರತೀಯ ಮೂಲದ ಅಮೆರಿಕದ ವೈದ್ಯ ಡಾ.ಪೌಲ್ ಕಲಾನಿಧಿ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಮರಣ ಹೊಂದಿದರು. ರೋಗಿಯಾಗಿ ತಮ್ಮ ಅನುಭವವನ್ನು ಆತ್ಮಚರಿತ್ರೆಯಲ್ಲಿ ಮನಮುಟ್ಟುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಕನ್ನಡಕ್ಕೆ ಅನುವಾದ ಮಾಡುವಾಗ ಮೂಲಕೃತಿಯಲ್ಲಿನ ಜೀವಸತ್ವವನ್ನು ಜೀವಂತವಾಗಿ ಉಳಿಸಿಕೊಳ್ಳಲಾಗಿದೆ. ಈ ಕೃತಿ ಕೇವಲ ಕ್ಯಾನ್ಸರ್ ರೋಗಿಗಳು ಮಾತ್ರವಲ್ಲದೆ ಜನಸಾಮಾನ್ಯರು ಸಹ ಓದಬೇಕು ಎಂದರು.

ಮೈಸೂರು ವಿವಿಯ ಡಾ.ಡಿ.ಸಿ.ನಂಜುಂಡ ಅವರು ಅನುವಾದಿಸಿರುವ ‘ಉಸಿರೇ ಗಾಳಿಯಾದಾಗ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕಾಲೇಜಿನ ಟ್ರಸ್ಟಿ ಎಚ್.ಎನ್ ನಾಗರಾಜ್, ಡಾ.ಎಂ ಪುಟ್ಟಸ್ವಾಮಿ, ಜೆಎಸ್‌ಎಸ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ರವಿಕೃಷ್ಣಪ್ಪ, ಮಹಾಜನ ಕಾಲೇಜಿನ ಡಾ.ಭಾರ್ಗವಿ ಹೆಮ್ಮಿಗೆ ಇತರರು ಪಾಲ್ಗೊಂಡಿದ್ದರು.