ಹೈದರಾಬಾದ್: ಮೂರು ರಾಜಧಾನಿಗಳನ್ನು ಸ್ಥಾಪಿಸುವ ಮೂಲಕ ಆಂಧ್ರಪ್ರದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕೆಂಬ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕನಸಿಗೆ ವಿಧಾನಪರಿಷತ್ ಪ್ರಮುಖ ಅಡ್ಡಗೋಡೆಯಾಗಿ ನಿಂತಿದೆ. 3 ರಾಜಧಾನಿಗಳನ್ನು ಹೊಂದುವ ಕುರಿತ ಮಸೂದೆಗೆ ವಿಧಾನಭೆಯಲ್ಲಿ ಸಲೀಸಾಗಿ ಅಂಗೀಕಾರ ದೊರೆತಿದೆ. ಆದರೆ ವಿಧಾನ ಪರಿಷತ್ನಲ್ಲಿ ವಿರೋಧ ಪಕ್ಷ ಟಿಡಿಪಿಯ ಬಲ ಹೆಚ್ಚಿರುವುದರಿಂದ ಮಸೂದೆಗೆ ಆತಂಕ ಎದುರಾಗಿದೆ. ಹೀಗಾಗಿ ಸಿಎಂ ಜಗನ್ ಮೋಹನ್ ರೆಡ್ಡಿ ವಿಧಾನ ಪರಿಷತ್ ವಿಸರ್ಜನೆಯ ಅಸ್ತ್ರ ಪ್ರಯೊಗಿಸಲು ಮುಂದಾಗಿದ್ದಾರೆ.
‘ಕೇವಲ ರಾಜಕೀಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವಿಧಾನ ಪರಿಷತ್ನಂತಹ ಸದನವನ್ನು ನಾವು ಹೊಂದಬೇಕೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ವಿಧಾನ ಪರಿಷತ್ತನ್ನು ಹೊಂದುವುದು ಕಡ್ಡಾಯವಲ್ಲ. ಅದನ್ನು ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡದ್ದು. ವಿಧಾನ ಪರಿಷತ್ ವಿಸರ್ಜನೆ ಬಗ್ಗೆ ಸೋಮವಾರ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಜಗನ್ ಹೇಳಿದ್ದಾರೆ. ವಿಧಾನಪರಿಷತ್ ವಿಸರ್ಜನೆಗೆ ಇರುವ ತೊಡಕುಗಳೇನು ಎಂಬ ಬಗ್ಗೆಯೂ ಜಗನ್ ಕಾನೂನು ಸಲಹೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೂರು ರಾಜಧಾನಿ ರಚನೆ ಸಂಬಂಧಿಸಿದ ಮಸೂದೆ ಹಾಗೂ ಆಂಧ್ರಪ್ರದೇಶ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವ ಮಸೂದೆ ಎರಡನ್ನೂ ಆಂಧ್ರಪ್ರದೇಶ ವಿಧಾನಸಭೆ ಕಳೆದ ಸೋಮವಾರ ಬಹುಮತದಿಂದ ಅಂಗೀಕರಿಸಿತ್ತು. ಅಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಬಲವಿದ್ದಿದ್ದರಿಂದ ಸಮಸ್ಯೆ ಆಗಲಿಲ್ಲ. ಆದರೆ ವಿಧಾನ ಪರಿಷತ್ನಲ್ಲಿ ಟಿಡಿಪಿ ಬಲ ಹೊಂದಿರುವುದರಿಂದ ಜಗನ್ರ ಮಹತ್ವಾಕಾಂಕ್ಷೆಯ ಮಸೂದೆಗಳು ಪಾಸಾಗಿಲ್ಲ. ವಿಧಾನಪರಿಷತ್ನಲ್ಲಿ ಸರ್ಕಾರ ಮಂಗಳವಾರ ಮಸೂದೆಗಳನ್ನು ಮಂಡಿಸುತ್ತಲೇ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವ ಮುನ್ನ ನಿಯಮ 71ರ ಅಡಿಯಲ್ಲಿ ನೀಡುವ ನೋಟಿಸ್ ಕುರಿತು ಚರ್ಚೆ ನಡೆಸಬೇಕೆಂದು ಟಿಡಿಪಿ ಸೂಚಿಸಿತು. ಟಿಡಿಪಿ ಆಗ್ರಹವನ್ನು ಪರಿಷತ್ ಅಧ್ಯಕ್ಷರು ಒಪ್ಪಿಕೊಂಡಿದ್ದಕ್ಕೆ ವೈಎಸ್ಆರ್ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಇದಕ್ಕೂ ಮುನ್ನ ಮೂರು ರಾಜಧಾನಿ ಮಸೂದೆ ವಿರೋಧಿಸಿ ಟಿಡಿಪಿ ಮಂಡಿಸಿದ್ದ ಗೊತ್ತುವಳಿಯು ವಿಧಾನ ಪರಿಷತ್ನಲ್ಲಿ ಭಾರಿ ಗದ್ದಲದ ನಡುವೆ ಅಂಗೀಕಾರಗೊಂಡಿತ್ತು. ಹೀಗಾಗಿ ಸಭಾಧ್ಯಕ್ಷರು ಮಸೂದೆಯನ್ನು ಆಯ್ಕೆ ಸಮಿತಿ ವಿವೇಚನಾಧಿಕಾರಕ್ಕೆ ವಹಿಸಿದ್ದಾರೆ. ನಿಯಮದ ಪ್ರಕಾರ ಯಾವುದೇ ಮಸೂದೆಗಳನ್ನು ಆಯ್ಕೆ ಸಮಿತಿ 3 ತಿಂಗಳ ಕಾಲ ಪರಿಶೀಲನೆ ನಡೆಸಬಹುದಾಗಿದೆ.
ಎನ್ಟಿಆರ್ ಕೂಡ ಮಾಡಿದ್ದರು
1983ರಲ್ಲಿ ಟಿಡಿಪಿ ಸಂಸ್ಥಾಪಕ ಎನ್.ಟಿ. ರಾಮರಾವ್ ನೇತೃತ್ವದ ಸರ್ಕಾರ, ಕಾಂಗ್ರೆಸ್ ಬಹುಮತ ಹೊಂದಿದ್ದ ವಿಧಾನ ಪರಿಷತ್ ವಿಸರ್ಜಿಸುವ ಮಸೂದೆಯನ್ನು 210 ಮತಗಳಿಂದ ಅಂಗೀಕರಿಸಿತ್ತು. ಆದರೆ ಕೇಂದ್ರದಲ್ಲಿದ್ದ ಇಂದಿರಾಗಾಂಧಿ ಸರ್ಕಾರ ಅದನ್ನು ಪರಿಗಣಿಸದಿದ್ದರಿಂದ ಎನ್ಟಿಆರ್ಗೆ ಸೋಲಾಯಿತು. ಬಳಿಕ ಎನ್ಟಿಆರ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ನಂತರ ಮತ್ತೆ 1985 ಏಪ್ರಿಲ್ 30ರಂದು ರಾಜ್ಯ ಸರ್ಕಾರ ಮಸೂದೆ ಅಂಗೀಕರಿಸಿತು. ಈ ಬಾರಿ ಸಂಸತ್ತು ಕೂಡ 1985 ಮೇ.24ರಂದು ಮಸೂದೆಯನ್ನು ಅಂಗೀಕರಿಸಿತ್ತು.
ಆಂಧ್ರ ಅಭಿವೃದ್ಧಿಗೆ 3 ರಾಜಧಾನಿ
ಆಂಧ್ರಪ್ರದೇಶದ ಉತ್ತರ ಮತ್ತು ದಕ್ಷಿಣ ಕರಾವಳಿ ಹಾಗೂ ರಾಯಲಸೀಮೆ ಪ್ರದೇಶಗಳ ಅಭಿವೃದ್ಧಿಗಾಗಿ ಸಿಎಂ ಜಗನ್ 3 ರಾಜಧಾನಿ ನಿರ್ವಿುಸಲು ಪಣತೊಟ್ಟಿದ್ದಾರೆ. ಒಂದು ರಾಜಧಾನಿ ಆಡಳಿತಕ್ಕೆ, ಒಂದು ರಾಜಧಾನಿ ನ್ಯಾಯಾಂಗಕ್ಕೆ ಹಾಗೂ ಮತ್ತೊಂದು ರಾಜಧಾನಿ ಶಾಸಕಾಂಗಕ್ಕೆ ಕಾರ್ಯ ನಿರ್ವಹಿಸಲಿವೆ. ಕರ್ನಲನ್ನು ನ್ಯಾಯಿಕ ರಾಜಧಾನಿ, ಅಮರಾವತಿ ಶಾಸಕಾಂಗ ರಾಜಧಾನಿ ಹಾಗೂ ವಿಶಾಖಪಟ್ಟಣಂನ್ನು ಆಡಳಿತಾತ್ಮಕ ರಾಜಧಾನಿಯನ್ನಾಗಿ ಮಾಡುವುದು ಜಗನ್ ಗುರಿ. ಒಂದುವೇಳೆ ಇದು ಅನುಷ್ಠಾನಕ್ಕೆ ಬಂದರೆ ಅಮರಾವತಿಯಿಂದ ಸಿಎಂ ಕಾರ್ಯಾಲಯ ಸೇರಿ ಹಲವು ಇಲಾಖೆ ಕಚೇರಿಗಳು, ರಾಜಭವನ ಮತ್ತು ಸಚಿವಾಲಯಗಳು ವಿಶಾಖಪಟ್ಟಣಂಗೆ ಸ್ಥಳಾಂತರಗೊಳ್ಳಲಿವೆ. ಆಂಧ್ರಪ್ರದೇಶದ ಹೈಕೋರ್ಟ್ ಕರ್ನಲ್ಗೆ ಸ್ಥಳಾಂತರಗೊಳ್ಳಲಿದೆ. ಅಮರಾವತಿ ವಿಧಾನಸಭೆಯನ್ನು ಹೊಂದಿರುವ ಶಾಸಕಾಂಗ ರಾಜಧಾನಿಯಾಗಿ ಉಳಿಯಲಿದೆ.
ರಾಜಧಾನಿ ಸ್ಥಳಾಂತರ ದುಬಾರಿ
ವಿಶಾಖಪಟ್ಟಣಂನಿಂದ ಕರ್ನಲ್ಗೆ 691 ಕಿ.ಮೀ. ಅಂತರವಿದೆ. ರಾಜಧಾನಿ ಬದಲಾಗುವುದರಿಂದ ಸಾವಿರಾರು ಸರ್ಕಾರಿ ಅಧಿಕಾರಿಗಳು ಸ್ಥಳಾಂತರಗೊಳ್ಳಬೇಕಾಗುತ್ತದೆ. ಜತೆಗೆ ಹೊಸ ರಾಜಧಾನಿಗಳಲ್ಲಿ ಅಧಿಕೃತ ಕಚೇರಿಗಳನ್ನು ನಿರ್ವಿುಸುವವರೆಗೆ ಸರ್ಕಾರ ಕಚೇರಿಗಳಿಗಾಗಿ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆಯಬೇಕಾಗುತ್ತದೆ. ಇದಕ್ಕೆ ಕೋಟ್ಯಂತರ ರೂ. ವೆಚ್ಚವಾಗಲಿದ್ದು, ಅಮರಾವತಿಯಲ್ಲಿ ಈಗಾಗಲೇ ಸಾವಿರಾರು ಕೋಟಿ ರೂ. ಖರ್ಚುಮಾಡಿ ನಿರ್ವಿುಸಿರುವ ಕಟ್ಟಡಗಳು ಪಾಳುಬೀಳುತ್ತವೆ.
ಯಾವ್ಯಾವ ರಾಜ್ಯಗಳಲ್ಲಿದೆ ವಿಧಾನಪರಿಷತ್?
ಆಂಧ್ರಪ್ರದೇಶ. ಕರ್ನಾಟಕ. ಬಿಹಾರ .ಮಹಾರಾಷ್ಟ್ರ .ತೆಲಂಗಾಣ. ಉತ್ತರಪ್ರದೇಶ.
ನಾಯ್ಡು ಕನಸಿಗೆ ಎಳ್ಳುನೀರು
ಹಲವು ವರ್ಷಗಳಿಂದ ಆಂಧ್ರಪ್ರದೇಶಕ್ಕೆ ರಾಜಧಾನಿಯ ಸಮಸ್ಯೆ ಕಾಡುತ್ತಿದ್ದು, ಪ್ರತಿ ಬಾರಿ ರಾಜ್ಯದ ಗಡಿ ಬದಲಾದಾಗ ಆಂಧ್ರ ತನ್ನ ರಾಜಧಾನಿ ಕಳೆದುಕೊಳ್ಳುತ್ತಿದೆ. 1953ರಲ್ಲಿ ಆಂಧ್ರ ಮತ್ತು ತಮಿಳುನಾಡು ಮರುವಿಂಗಡಣೆಯಾದ ಬಳಿಕ ಆಂಧ್ರಪ್ರದೇಶ ಮದ್ರಾಸನ್ನು ಕಳೆದುಕೊಂಡಿತು. 2004ರಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಭಜನೆಯಾದಾಗ ಆಂಧ್ರ ತನ್ನ ರಾಜಧಾನಿಯಾಗಿದ್ದ ಹೈದರಾಬಾದನ್ನು ಕಳೆದುಕೊಂಡಿತು. ನಂತರ ಅಧಿಕಾರಕ್ಕೆ ಬಂದ ಚಂದ್ರಬಾಬು ನಾಯ್ಡು ಸರ್ಕಾರ ವಿಜಯವಾಡಕ್ಕೆ ಹೊಂದಿಕೊಂಡಂತೆ ಅಮರಾವತಿಯಲ್ಲಿ ಶಾಶ್ವತ ರಾಜಧಾನಿ ನಿರ್ವಿುಸುವ ಯೋಜನೆ ರೂಪಿಸಿತು. ಇದಕ್ಕಾಗಿ ರೈತರಿಂದ 33,000 ಎಕರೆ ಜಮೀನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತು. ಆದರೆ ಬಳಿಕ ಅಧಿಕಾರಕ್ಕೇರಿದ ಜಗನ್ ಮೋಹನ್ ರೆಡ್ಡಿ ಈ ಯೋಜನೆ ರದ್ದುಗೊಳಿಸಿ ಮೂರು ರಾಜಧಾನಿಗಳ ಮೂಲಕ ಅಧಿಕಾರ ವಿಕೇಂದ್ರಿಕರಣಕ್ಕೆ ಮುಂದಾಗಿದ್ದಾರೆ. ಆದರೆ ಈಗಾಗಲೇ ಅಮರಾವತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಸರ್ಕಾರದ ಬೊಕ್ಕಸದಿಂದ ನಾಯ್ಡು ಸಾವಿರಾರು ಕೋಟಿ ರೂ. ಹಣ ವ್ಯಯಿಸಿದ್ದು ಜಗನ್ ಯೋಜನೆಯಿಂದ ಅದೆಲ್ಲ ಕೊಚ್ಚಿಹೋದಂತಾಗುತ್ತದೆ.
ವಿಧಾನಪರಿಷತ್ ವಿಸರ್ಜನೆ ಹೇಗೆ?
ನಿಯಮ 169ರ ಅನ್ವಯ ಯಾವುದೇ ವಿಧಾನಪರಿಷತ್ನ್ನು ವಿಸರ್ಜಿಸುವ ಮತ್ತು ಪುನಃಸ್ಥಾಪಿಸುವ ಅಧಿಕಾರವಿದೆ.
ವಿಧಾನಸಭೆಯಲ್ಲಿ ವಿಧಾನಪರಿಷತ್ ವಿಸರ್ಜನೆ ಕುರಿತ ಮಸೂದೆಯನ್ನು 3/2 ಬಹುಮತದೊಂದಿಗೆ ಅಂಗೀಕರಿಸ ಬೇಕಾಗುತ್ತದೆ.
ನಂತರ ಸಂಸತ್ನಲ್ಲಿ ವಿಸರ್ಜನೆ ಮಸೂದೆ ಯನ್ನು ಅಂಗೀಕರಿಸಬೇಕು. ಸಂಸತ್ನ ಒಪ್ಪಿಗೆ ಬಳಿಕ ವಿಧಾನಪರಿಷತ್ ವಿಸರ್ಜನೆ ಮಾಡಬಹುದು.