ಕೆನರಾ ಬ್ಯಾಂಕ್​ಗೆ ವಂಚನೆ

ನವದೆಹಲಿ: ಕೋಲ್ಕತ ಮೂಲದ ಕಂಪ್ಯೂಟರ್ ಕಂಪನಿ ಆರ್​ಪಿ ಇನ್ಪೋಸಿಸ್ಟಂ 515 ಕೋಟಿ ರೂ. ಸಾಲ ಮರುಪಾವತಿಸದೆ ವಂಚಿಸಿದೆ ಎಂದು ಕೆನರಾ ಬ್ಯಾಂಕ್ ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ದೂರು ದಾಖಲಿಸಿದೆ. ಇದನ್ನು ಆಧರಿಸಿ ಕಂಪನಿಯ ನಿರ್ದೇಶಕರಾದ ಶಿವಾಜಿ ಪಂಜಾ, ಕೌಸ್ತುವ್ ರೇ, ವಿನಯ್ ಬಾಫ್ನಾ, ಉಪಾಧ್ಯಕ್ಷ (ಹಣಕಾಸು)ರಾದ ದೇವನಾಥ್ ಪೌಲ್ ಹಾಗೂ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಅವರ ವಿರುದ್ಧ ಅಪರಾಧ ಪಿತೂರಿ, ವಂಚನೆ, ಪೋರ್ಜರಿ ಆರೋಪ ಹೊರಿಸಲಾಗಿದೆ. ಈ ಕಂಪನಿ ಕೆನರಾ ಬ್ಯಾಂಕ್ ನೇತೃತ್ವದ 10 ಬ್ಯಾಂಕುಗಳ ಒಕ್ಕೂಟಕ್ಕೆ 515 ಕೋಟಿ ರೂ. ವಂಚಿಸಿದೆ.

ಯಾವುದು ಹತ್ತು ಬ್ಯಾಂಕುಗಳು?: ಕೆನರಾಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆಂಡ್ ಜೈಪುರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಫೆಡರಲ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್.

ಮಮತಾಗೆ ಆಪ್ತ ಶಿವಾಜಿ ಪಂಜಾ

ಕಂಪನಿಯ ನಿರ್ದೇಶಕರಲ್ಲೊಬ್ಬರಾದ ಶಿವಾಜಿ ಪಂಜಾ ಈ ಹಿಂದೆಯೂ ಹಣಕಾಸು ಅಪರಾಧದಲ್ಲಿ ಭಾಗಿಯಾದವರು. 2015ರಲ್ಲಿ ಢಾಕಾದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಗಿದ್ದಾಗಲೇ ನಾಟಕೀಯವಾಗಿ ಬಂಧನಕ್ಕೆ ಒಳಗಾಗಿದ್ದರು. ಐಡಿಬಿಐ ಬ್ಯಾಂಕ್​ಗೆ 180 ಕೋಟಿ ರೂ. ವಂಚಿಸಿದ್ದಕ್ಕೆ ಪೊಲೀಸರು ಬಂಧಿಸಿದ್ದರು.

ವಿಚಾರಣೆಗೆ ಹಾಜರಾಗಲು ನೀರವ್ ಮೋದಿ ನಕಾರ

ಪಿಎನ್​ಬಿಗೆ -ಠಿ; 12,600 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಕಳುಹಿಸಿದ್ದ ಇ-ಮೇಲ್​ಗೆ ನೀರವ್ ಮೋದಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನವಾರ ವಿಚಾರಣೆ ಆರಂಭಿಸಲಿರುವ ಸಿಬಿಐ, ನೀರವ್ ಮೋದಿಯ ಅಧಿಕೃತ ಇ-ಮೇಲ್ ಐಡಿಗೆ ನೋಟಿಸ್ ರವಾನಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ನೀರವ್, ‘ವ್ಯವಹಾರ ನಿಮಿತ್ತ ವಿದೇಶದಲ್ಲಿದ್ದೇನೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ’ ಎಂದಿದ್ದಾರೆ.

ನೀರವ್ ಕಳುಹಿಸಿದ ಉತ್ತರಕ್ಕೆ ಬುಧವಾರ ಬೆಳಗ್ಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ತನಿಖಾ ಸಂಸ್ಥೆ, ಪಾಸ್​ಪೋರ್ಟ್ ರದ್ದಾಗಿರುವ ಕಾರಣ ರಾಯಭಾರ ಕಚೇರಿ ಮೂಲಕವೇ ನೀವು ಭಾರತಕ್ಕೆ ಬರಬೇಕಷ್ಟೆ. ಯಾವುದೇ ದೇಶದಲ್ಲಿದ್ದರೂ ಕೂಡಲೇ ಅಲ್ಲಿನ ಭಾರತದ ರಾಯಭಾರ ಕಚೇರಿಯನ್ನು ಸಂರ್ಪಸಬೇಕು. ಮುಂದಿನವಾರದಿಂದ ಆರಂಭವಾಗುವ ವಿಚಾರಣೆ ಪ್ರಕ್ರಿಯೆಗೆ ಸಿಬಿಐ ಎದುರು ಹಾಜರಾಬೇಕು ಎಂದು ನೀರವ್ ಮೋದಿಗೆ ತಾಕೀತು ಮಾಡಿದೆ. ಆದರೆ, ನೀರವ್ ಮೋದಿ ಎಲ್ಲಿದ್ದಾರೆ ಎಂಬ ಸುಳಿವು ಇದುವರೆಗೂ ಲಭ್ಯವಾಗಿಲ್ಲ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ಈ ಮಧ್ಯೆ, ಪಿಎನ್​ಬಿಯ ಲೆಕ್ಕಪರಿಶೋಧಕರೊಬ್ಬರನ್ನು ಸಿಬಿಐ ಬಂಧಿಸಿದೆ. ಜತೆಗೆ ನೀರವ್ ಮೋದಿಗೆ ಸೇರಿದ -ಠಿ; 70 ಕೋಟಿ ಮೌಲ್ಯದ ನಾಲ್ಕು ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಬ್ಲೂಕಾರ್ನರ್ ನೋಟಿಸ್

ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಇಮ್ಮಿಗ್ರೇಷನ್ ಬ್ಯೂರೋ ಫೆ.22ರಂದು ಬ್ಲೂಕಾರ್ನರ್ ನೋಟಿಸ್ ಹೊರಡಿಸಿದೆ. ಇದರಂತೆ, ಎಲ್ಲ ಬಂದರುಗಳಲ್ಲೂ ಇವರಿಬ್ಬರ ಚಲನವಲನಗಳ ಬಗ್ಗೆ ನಿಗಾವಹಿಸಲು ಸೂಚಿಸಲಾಗಿದೆ.

ಪಿಎನ್​ಬಿ ಷೇರು ಕುಸಿತ

ಪಂಜಾಬ್ ನ್ಯಾಷನಲ್ ಬ್ಯಾಂಕ್​ನ ಷೇರು ಮೌಲ್ಯ ಬುಧವಾರ ಒಟ್ಟು ಶೇಕಡ 6.45 ಕುಸಿತ ಕಂಡು ದಿನದ ವಹಿವಾಟಿನ ಕೊನೆಗೆ -ಠಿ; 102 ಕ್ಕೇರಿದೆ. ಇದೇ ವೇಳೆ, ಬ್ಯಾಂಕ್ ನಿಫ್ಟಿ ಸೂಚ್ಯಂಕವೂ ಕುಸಿತ ಕಂಡಿದ್ದು, ಸರ್ಕಾರಿ ಸ್ವಾಮ್ಯದ ವಿವಿಧ ಬ್ಯಾಂಕುಗಳ ಷೇರುಮೌಲ್ಯ ಕುಸಿತ ಕಂಡಿದೆ.

Leave a Reply

Your email address will not be published. Required fields are marked *