ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗದಲ್ಲಿ ನೀರಿನ ಕೊರತೆಯಾಗುತ್ತಿದ್ದು, ಮೈಲ್ 69 ರಲ್ಲಿ ನೀರಿನ ಗೇಜ್ ಕಾಪಾಡಿಕೊಂಡು ಅಚ್ಚುಕಟ್ಟು ಕೊನೆಯ ಭಾಗದ ಬೆಳೆಗಳಿಗೆ ನೀರು ಕೊಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ತುಂಗಭದ್ರಾ ಎಡದಂಡೆ 69ನೇ ಮೈಲ್‌ಗೆ ಬುಧವಾರ ಭೇಟಿ ನೀಡಿ ಗೇಜ್ ಪರಿಶೀಲಿಸಿ ಮಾತನಾಡಿದರು. ನಾಲೆ ಕೊನೆಯ ಭಾಗಕ್ಕೆ ನೀರು ತಲುಪಿಸಲು ರಾತ್ರಿ ಸಮಯದಲ್ಲಿ ಗೇಜ್ ಕಾಯ್ದುಕೊಳ್ಳಬೇಕು. ಮುಖ್ಯ ಕಾಲುವೆಯ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆದು ಅನಧಿಕೃತವಾಗಿ ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ಕಾಲುವೆಯಲ್ಲಿ ನೀರಿನ ಗೇಜ್ ವ್ಯತ್ಯಾಸವಾಗಿ ಕೊನೆಯ ಭಾಗಕ್ಕೆ ತಲುಪುತಿಲ್ಲ. ಕೊನೆಯ ಭಾಗಕ್ಕೆ ಎರಡು ದಿನದಲ್ಲಿ ನೀರು ತಲುಪಬೇಕು ಎಂದು ತಾಕೀತು ಮಾಡಿದರು.