ಕಾಲುವೆ ಮೂಲಕ ಕೆರೆ ತುಂಬಿಸಲು ಆಗ್ರಹ

ಬೆಳಗಾವಿ: ರಾಮೇಶ್ವರ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರಿನ ಕೆರೆಗಳನ್ನು ಕಾಲುವೆ ಮೂಲಕ ತುಂಬಿಸುವಂತೆ ಆಗ್ರಹಿಸಿ ಬುಧವಾರ ರಾಮದುರ್ಗ, ಸವದತ್ತಿ,ಗೋಕಾಕ ತಾಲೂಕಿನ ವಿವಿಧ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ರಾಮದುರ್ಗ, ಗೋಕಾಕ ಹಾಗೂ ಸವದತ್ತಿ ತಾಲೂಕಿನ 20 ಕ್ಕೂ ಅಧಿಕ ಹಳ್ಳಿಗಳಲ್ಲಿ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರರೂಪ ಪಡೆದುಕೊಂಡಿದೆ. ಕುಡಿಯುವ ನೀರಿಗಾಗಿ ಜನರು ನಿತ್ಯ ಅಲೆದಾಡುತ್ತಿದ್ದಾರೆ. ಕೆಲವು ಕಡೆ ಕೊಳವೆ ಬಾವಿಗಳು ನೀರಿಲ್ಲದೆ ಬಂದ್ ಆಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ ಎಂದರು.

ಪ್ರತಿ ಸಾರಿ ಘಟಪ್ರಭಾ ನದಿಗೆ ನೀರು ಹರಿಸಿದಾಗ ರಾಮೇಶ್ವರ ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರಿನ ಕೆರೆಗಳನ್ನು ಕಾಲುವೆ ಮೂಲಕ ತುಂಬಿಸುವಂತೆ ಜಿಲ್ಲಾಧಿಕಾರಿ, ಕರ್ನಾಟಕ ನೀರಾವರಿ ನಿಗಮ ಇಂಜಿನಿಯರ್‌ಗಳಿಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಪರಿಣಾಮ ತೀವ್ರ ಬಿಸಿಲಿನಲ್ಲಿ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ಪ್ರಾದೇಶಿಕ ಆಯುಕ್ತರು ಕೂಡಲೇ ನೀರು ಬಿಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ಗ್ರಾಮಸ್ಥರು ಒತ್ತಾಯಿಸಿದರು.

ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಪ್ರತಿ ದಿನ 2 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಮಾತ್ರ 4 ದಿನಗಳಲ್ಲಿ ನೀರು ತಲುಪಲು ಸಾಧ್ಯವಾಗಲಿದೆ. ಜಲಾಶಯದಿಂದ ಜಾಕ್ವೆಲ್‌ವರೆಗೆ ಸುಮಾರು 15 ಸಾವಿರ ರೈತರ ಪಂಪ್ ಸೆಟ್‌ಗಳಿವೆ, 15 ಬ್ರಿಜ್ ಕಮ್ ಬ್ಯಾರೇಜ್‌ಗಳಿವೆ. ಇದರಿಂದ ನಮಗೆ ನೀರು ತಲುಪಲು ತಡವಾಗುತ್ತಿದೆ. ಮಧ್ಯೆ ರೈತರು ಕೃಷಿ ಚಟುವಟಿಕೆಗಳಿಗಾಗಿ ಒಂದಿಷ್ಟು ನೀರು ಹಿಡಿದಿಟ್ಟುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸುವ ಸಂದರ್ಭದಲ್ಲಿ ಕೆರೆಯನ್ನು ಕೃಷಿ ಚಟುವಟಿಕೆಗಳಿಗೆ ರೈತರು ಬಳಸದಂತೆ ಪೊಲೀಸ್ ಭದ್ರತೆ ನಿಯೋಜಿಸಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮೂಲಕ ರೈತರು ವಿನಂತಿಸಿದರು.

ಜಿಪಂ ಸದಸ್ಯ ರಮೇಶ ದೇಶಪಾಂಡೆ, ರಾಮಣ್ಣಾ ಕಳ್ಳಿಗುದ್ದಿ, ರಾಮಣ್ಣ ಮಾರಡ್ಡಿ, ತಮ್ಮಣ್ಣ ಕೊಳವಿ, ಅಶೋಕ ಬಡಿಗೇರ, ಪ್ರಶಾಂತ ಹುಲಕುಂದ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಪಂ ಸದಸ್ಯರು ಇದ್ದರು.

Leave a Reply

Your email address will not be published. Required fields are marked *