ಸಂಸತ್​ ಕಲಾಪದಲ್ಲಿ ಚಾಕೊಲೇಟ್​ ತಿಂದಿದ್ದಕ್ಕೆ ಕ್ಷಮೆ ಕೋರಿದ ಪ್ರಧಾನಿ ಜಸ್ಟಿನ್​ ಟ್ರುಡೋ

ಒಟ್ಟಾವಾ: ಸಂಸತ್​ ಭವನದಲ್ಲಿ ಮತದಾನ ಪ್ರಕ್ರಿಯೆ ನಡೆಯುವ ವೇಳೆ ಚಾಕೊಲೇಟ್​ ತಿಂದಿದ್ದಕ್ಕಾಗಿ ಪ್ರಧಾನ ಮಂತ್ರಿ ಜಸ್ಟಿನ್​ ಟ್ರುಡೋ ಅವರು ಸಂಸತ್​ನ ಕ್ಷಮೆ ಯಾಚಿಸಿದ್ದಾರೆ.

ಕೆನಡಾ ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಂಸತ್​ನಲ್ಲಿ ತಡರಾತ್ರಿಯವರೆಗೆ ಚರ್ಚೆ ನಡೆದು ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಜಸ್ಟಿನ್​ ಟ್ರುಡೋ ಅವರು ಒಂದು ಚಾಕೊಲೇಟ್​ ತಿಂದಿದ್ದಾರೆ.

ಟ್ರುಡೋ ಅವರು ಚಾಕೊಲೇಟ್​ ತಿನ್ನುವುದನ್ನು ವಿರೋಧ ಪಕ್ಷದ ಸಂಸದ ಸ್ಕಾಟ್​ ರೀಡ್​ ಗಮನಿಸಿ ಈ ವಿಷಯವನ್ನು ಸಂಸತ್​ ಗಮನಕ್ಕೆ ತಂದಿದ್ದಾರೆ. ಪ್ರಧಾನಿ ಚಾಕಲೇಟ್​ ತಿಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಕಾಟ್​ ‘ಪ್ರಧಾನಿಗಳು ತಮ್ಮ ಭ್ರಷ್ಟಾಚಾರ ಪ್ರಕರಣದಿಂದ ಈಗಾಗಲೇ ಸಂಸತ್​ ಭವನವನ್ನು ಕೊಳಕಾಗಿದ್ದಾರೆ. ಈಗ ಅವರು ತಾವು ತಿನ್ನುವ ಪದಾರ್ಥದಲ್ಲಿ ಸಂಸತ್​ ಅನ್ನು ಕೊಳಕಾಗಿಸುವುದು ಬೇಡ ಎಂದು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿ ಜಸ್ಟಿನ್​ ಟ್ರುಡೋ ಅವರು ನಾನು ತಿಂದಿದ್ದು ಚಾಕಲೋಟ್​, ಅದಕ್ಕಾಗಿ ನಾನು ಸಂಸತ್​ನ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಕೆನಡಾ ಸಂಸತ್​ನೊಳಗೆ ಆಹಾರ ಪದಾರ್ಥ ಕೊಂಡೊಯ್ಯಲು ಮತ್ತು ಸೇವಿಸಲು ಅವಕಾಶವಿಲ್ಲ. ನಿಯಮಾವಳಿಗಳ ಪ್ರಕಾರ ಸಂಸತ್​ನಲ್ಲಿ ಸಂಸದರು ಕೇವಲ ನೀರು ಮಾತ್ರ ಕುಡಿಯಬಹುದಾಗಿದೆ. (ಏಜೆನ್ಸೀಸ್​)