ಇನ್ನು ಆಲ್ಕೋಹಾಲ್​ಗೂ ಆನ್​ಲೈನ್​ನಲ್ಲೇ ಆರ್ಡರ್!

ಬೆಂಗಳೂರು: ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಆನ್​ಲೈನ್​ನಲ್ಲೇ ಮದ್ಯ ಮಾರಾಟ ವ್ಯವಸ್ಥೆ ಜಾರಿಗೆ ಬರಲಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿ ಈಗಾಗಲೇ ಮಹಾರಾಷ್ಟ್ರ ಸರ್ಕಾರ ಇದನ್ನು ಜಾರಿಗೆ ತಂದಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಯೋಜನೆ ಜಾರಿಗೆ ತರಲು ಅಬಕಾರಿ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಒಂದು ವೇಳೆ ಆನ್​ಲೈನ್ ವ್ಯವಸ್ಥೆ ಜಾರಿಗೆ ಬಂದರೆ ಪ್ರತಿ ವರ್ಷ 1500ರಿಂದ 2 ಸಾವಿರ ಕೋಟಿ ರೂ. ಆದಾಯ ಹೆಚ್ಚಾಗಲಿದೆ. ಈ ಕುರಿತು ಇಲಾಖೆ ಅಧಿಕಾರಿಗಳು ರಿಟೇಲ್ ಅಂಗಡಿಗಳ ಮಾಲೀಕರು ಮತ್ತು ಪಾಲುದಾರರ ಜತೆ ರ್ಚಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 10,297 ಮದ್ಯ ಮಾರಾಟ ಕೇಂದ್ರಗಳಿವೆ. ಬೆಂಗಳೂರಿನಲ್ಲೇ 3,189 ಮದ್ಯದಂಗಡಿ ಮತ್ತು 31 ಮೈಕ್ರೋ ಬ್ರಿವರೀಸ್ (ಸ್ಥಳದಲ್ಲೇ ಸಿದ್ಧಪಡಿಸಿ ನೀಡುವ ಮಳಿಗೆಗಳು) ಇವೆ. ಆನ್​ಲೈನ್ ಮಾರಾಟ ಯೋಜನೆ ಜಾರಿ ಬಗ್ಗೆ ಸಿಎಂ ಜತೆ ರ್ಚಚಿಸಲಾಗುವುದು ಎಂದು ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್​ಎನ್ ಪ್ರಸಾದ್ ತಿಳಿಸಿದ್ದಾರೆ.

ಆಧಾರ್ ಸಂಖ್ಯೆ ಅಗತ್ಯ

ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡಿ ವಾಹನೆ ಚಾಲನೆ ಮಾಡುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಅದನ್ನು ತಡೆಯಲು ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಆನ್​ಲೈನ್​ನಲ್ಲಿ ಮದ್ಯ ಖರೀದಿಗೆ ವಯಸ್ಸಿನ ಮಾನದಂಡವಿದ್ದು, ಆಧಾರ್ ಸಂಖ್ಯೆ ಸೇರಿ ಗ್ರಾಹಕರ ಸಂಪೂರ್ಣ ವಿವರ ಪಡೆದು ವಯಸ್ಸು ಮತ್ತು ಗುರುತು ದೃಢಪಡಿಸಿಕೊಂಡ ನಂತರವೇ ಮನೆ ಬಾಗಿಲಿಗೆ ಮದ್ಯ ತಲುಪಿಸಲಾಗುವುದು. ಮದ್ಯದ ಮೇಲೆ ಜಿಯೋ ಟ್ಯಾಗ್ ಅಳವಡಿಸಿ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಗಾಕ್ಕೆ ವಿಚಕ್ಷಣ ದಳ ನೇಮಿಸಲಾಗುತ್ತದೆ.

ಆನ್​ಲೈನ್​ನಲ್ಲಿ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಆದಾಯ ಬರಲಿದೆ. ಈಗಾಗಲೇ ನೆರೆಯ ಮಹಾರಾಷ್ಟ್ರದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.

| ಕರುಣಾಕರ ಹೆಗ್ಡೆ, ಉಪಾಧ್ಯಕ್ಷ, ಕರ್ನಾಟಕ ರಾಜ್ಯ ವೈನ್ ಮಾರಾಟ ಒಕ್ಕೂಟ

ಪ್ರತ್ಯೇಕ ಆಪ್ ರೆಡಿ

ಚೆನ್ನೈ ಮೂಲದ ಹಿಪ್​ಬಾರ್ ಎಂಬ ಖಾಸಗಿ ಸಂಸ್ಥೆಯು ಆನ್​ಲೈನ್​ನಲ್ಲಿ ಮದ್ಯ ಮಾರಾಟ ಮಾಡುವ ಸಲುವಾಗಿ ಆಪ್ ಸಿದ್ಧಪಡಿಸುತ್ತಿದೆ. ಫ್ಲಿಪ್​ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಯೂ ಕೈಜೋಡಿಸುವ ಸಾಧ್ಯತೆ ಇದೆ.

ಚಿಲ್ಲರೆಗೆ ತೊಂದರೆ

ಈ ವ್ಯವಸ್ಥೆ ಜಾರಿಗೆ ಬಂದರೆ ಸಿಎಲ್-2(ರಿಟೇಲ್ ಶಾಪ್) ಮತ್ತು 11-ಸಿ(ಎಂಆರ್​ಪಿ ಮಾರಾಟ ಮಳಿಗೆ) ವ್ಯಾಪಾರಕ್ಕೆ ತೊಂದರೆಯಾಗಲಿದೆ. ಹೊಸ ನಿಯಮ ಜಾರಿಗೆ ಮುನ್ನ ಸಿಎಲ್-2 ಅಂಗಡಿಗಳಿಗೆ ತೊಂದರೆಯಾಗದಂತೆ ಈ ವ್ಯವಸ್ಥೆ ತರಬೇಕು ಎಂಬುದು ವ್ಯಾಪಾರಿಗಳ ಅಭಿಪ್ರಾಯ.