More

    ಕೆವಿಎಸ್ ಕುಟುಂಬಕ್ಕೆ ಪಿಂಚಣಿಯೇ ಆಧಾರ: ಟಿಕೆಟ್ ಕೈತಪ್ಪಲು ಇಬ್ಬರು ನಾಯಕರು ಕಾರಣವೆಂದ ಕೆ.ಎಸ್.ವಿಜಯಾನಂದ

    ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಅವರು ತಮ್ಮ ಆಸ್ತಿಯನ್ನು ಸಾರ್ವಜನಿಕರ ಉಪಯೋಗಕ್ಕೆಂದು ಬಳಸಿದರು. ಪ್ರಸ್ತುತ ನನ್ನ ತಾಯಿಗೆ ಮಾಸಿಕ ಬರುವ 28 ಸಾವಿರ ರೂ ಪಿಂಚಣಿಯಿಂದ ಬದುಕು ನಡೆಸುತ್ತಿದ್ದೇವೆ. ಟೀಕೆ ಮಾಡುವವರು ನನ್ನ ವಾಸ್ತವ ಸ್ಥಿತಿಯನ್ನು ನೋಡಲಿ. ಇನ್ನು ಟಿಕೆಟ್ ಕೈತಪ್ಪಲು ಇಬ್ಬರು ಪ್ರಮುಖ ಕಾರಣ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಹಾಗೂ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಹೆಸರೇಳದೇ ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಆಕ್ರೋಶ ವ್ಯಕ್ತಪಡಿಸಿದರು.
    ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಭಿಮಾನಿ ಪಡೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಈಗಿರುವುದು ಹತ್ತನೇ ಬಾಡಿಗೆ ಮನೆ. ಪಿಂಚಣಿಯಿಂದ ನಾವು ಬದುಕುತ್ತಿದ್ದೇವೆ. ನಾಮಪತ್ರ ಸಲ್ಲಿಸುವ ದಿನ ರಾಷ್ಟ್ರೀಯ ಪಕ್ಷವೊಂದರಿಂದ ಕೋಟ್ಯಂತರ ರೂ ನೀಡುವುದಾಗಿ ಆಫರ್ ಬಂದಿತ್ತು. ಆದರೆ ನನ್ನ ನಂಬಿದ ಜನರಿಗೆ ಮೋಸ ಮಾಡಲು ಇಷ್ಟವಿಲ್ಲ. ಪ್ರಮುಖವಾಗಿ ಈ ಚುನಾವಣೆಯಲ್ಲಿ ಯಾರೂ ನನ್ನ ಬಲಿಪಶು ಮಾಡುತ್ತಿಲ್ಲ. ಸ್ಪರ್ಧೆ ಮಾಡುತ್ತಿರುವುದು ನನ್ನ ಸ್ವತಂತ್ರ ನಿರ್ಧಾರ ಎಂದು ತಿರುಗೇಟು ನೀಡಿದರು.
    ನಿತ್ಯ ಸಚಿವ ಕೆ.ವಿ.ಶಂಕರಗೌಡರ ಮೊಮ್ಮಗನಾದರೂ ನಾನಿಂದು ಬೀದಿಗೆ ಬರಲು ಪ್ರಮುಖ ಕಾರಣರೆಂದರೆ ಒಬ್ಬ ಗಣಿಧಣಿ, ಮತ್ತೊಬ್ಬ ಜೈಲ್‌ಖಾನೆ ಬಳಿ ವಾಸವಿರುವ ಮಹಾನ್ ನಾಯಕ. ಜಿಲ್ಲೆಗೆ ಬಾಸ್ ಆಗಿರುವ ಆ ಗಣಿಧಣಿ ನಾನು ಜಿಪಂ ಸದಸ್ಯನಾಗಿದ್ದ ದಿನದಿಂದಲೂ ಮಾನಸಿಕ ಹಿಂಸೆ ನೀಡಿದರು. ನಿನಗೆ ಮೋಸ ಮಾಡುವುದಿಲ್ಲವೆಂದು ಇತ್ತೀಚೆಗೆ ಹೇಳಿದ್ದರು. ನಾನು ನಿನ್ನ ಪರ ಎಂದಿದ್ದರು. ಆ ಬಾಸ್ ಒಬ್ಬರೇ ಬೆಳೆಯಬೇಕೆ?. ನಮ್ಮಂತಹ ಸಣ್ಣಪುಟ್ಟವರು ಬೆಳೆಯುವುದು ಬೇಡವೇ? ಎಂದು ಪ್ರಶ್ನಿಸಿದರು.
    ತಾಪಂ ಮಾಜಿ ಸದಸ್ಯ ತಿಮ್ಮೇಗೌಡ ಮಾತನಾಡಿ, ಕೆ.ವಿ.ಶಂಕರಗೌಡರು ಶಾಸಕ, ಸಂಸದ, ಸಚಿವರಾಗಿ ಜನಪ್ರತಿನಿಧಿ ಹೇಗಿರಬೇಕು, ಏನೇನು ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ದೊಡ್ಡ ವ್ಯಕ್ತಿ. ಅವರು ಈ ಸಮಾಜಕ್ಕೆ ಮಾಡಿದ ಕೆಲಸಗಳೆಲ್ಲವೂ ಶಾಶ್ವತವಾಗಿದ್ದು, ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಅಂತಹ ಕುಟುಂಬಕ್ಕೆ ಜೆಡಿಎಸ್ ಅನ್ಯಾಯ ಮಾಡಿದೆ. ಅವಕಾಶ ಕೊಡುವುದಾಗಿ ಹೇಳುತ್ತಲೇ ಹರಕೆಯ ಕುರಿ ಮಾಡಿಬಿಟ್ಟರು ಎಂದು ಆಕ್ರೋಶ ಹೊರಹಾಕಿದರು.
    ಶಂಕರಗೌಡರು ಊರಿನಲ್ಲಿದ್ದ ಸ್ವಂತ ಮನೆಯನ್ನು ಆಸ್ಪತ್ರೆಗೆ ಬಿಟ್ಟುಕೊಟ್ಟರು, ಉಮ್ಮಡಹಳ್ಳಿ ಗೇಟ್ ಬಳಿ ತಮಗಿದ್ದ ಐದಾರು ಎಕರೆ ಜಮೀನನ್ನು ಉಗ್ರಾಣ ನಿಗಮಕ್ಕೆ ದಾನವಾಗಿ ಕೊಟ್ಟರು. ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಬಳಿಯ ಐದು ಎಕರೆ ಜಾಗದಲ್ಲಿ ರೈತರ ಸೊಸೈಟಿ, ಸಭಾಂಗಣ ಸೇರಿದಂತೆ ಹಲವು ಗೋಡೌನ್ ಸಮುಚ್ಚಯಗಳನ್ನು ನಿರ್ಮಿಸಿ ಮಂಡ್ಯದ ಅಭಿವೃದ್ಧಿಗೆ ಧಾರೆ ಎರೆದರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ಮಿಸಿ ಸಹಕಾರ ಕ್ಷೇತ್ರದಲ್ಲಿ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಆದರೆ ತಮ್ಮ ಕುಟುಂಬಕ್ಕೊಂದು ಸ್ವಂತ ಸೂರನ್ನು ಮಾಡಿಕೊಳ್ಳದ ಅವರ ನಿಸ್ವಾರ್ಥ ಮನೋಭಾವ ಇಂದಿನ ತಲೆಮಾರಿಗೆ ನಂಬಲಾಗದಂತಿದೆ. ಆದರೆ ಇದು ಸತ್ಯ ಎಂದರು.
    ಇಂತಹ ದೊಡ್ಡ ಮನೆತನದ ಮೊಮ್ಮಗ ಕೆ.ಎಸ್.ವಿಜಯಾನಂದರಿಗೆ ಇವತ್ತಿಗೂ ಸ್ವಂತ ಸೂರಿಲ್ಲ. ಇಂತಹ ಯಾವುದೇ ಸ್ವಾರ್ಥ ಸಾಧನೆಗೆ ಮುಂದಾಗದ ಈ ವ್ಯಕ್ತಿಯನ್ನು ಗೆಲ್ಲಿಸಿ, ಮಂಡ್ಯದ ಅಭಿವೃದ್ಧಿಗೆ ಮುನ್ನುಡಿಯಾಡಬೇಕು. ಮಂಡ್ಯ ಕ್ಷೇತ್ರದಲ್ಲಿ ಹೊಲ ಉಳುವ ಯೋಗ್ಯತೆ ಯಾರಿಗೂ ಇಲ್ಲವೇ, ಪಕ್ಕದ ಕ್ಷೇತ್ರದ ವ್ಯಕ್ತಿಯನ್ನು ಇಲ್ಲಿಗೆ ತಂದು ನಿಲ್ಲಿಸುವ ಜರೂರತ್ತು ಏನಿತ್ತೆಂದು ಜೆಡಿಎಸ್ ವರಿಷ್ಠರ ವಿರುದ್ಧ ಹರಿಹಾಯ್ದರು.
    ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಮಾತನಾಡಿ, ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿದೆ. ಆದರೆ ಸ್ವಾಭಿಮಾನಿ ಪಡೆಯ ಬಳಿ ಹಣವಿಲ್ಲ. ಸ್ವಾಭಿಮಾನಿ ಜನರಾದ ಕ್ಷೇತ್ರದ ಮತದಾರರು ಸೇಲ್ ಆಗುವವರಲ್ಲ. ಜೆಡಿಎಸ್‌ನ ಮಹಾ ನಾಯಕ ಎನ್ನಿಸಿಕೊಂಡವರು ಬೆಳಗ್ಗೆಯೇ ಮತದಾರರಿಗೆ ಕೋಳಿ ಹಂಚಲು ಹೋಗಿದ್ದಾರೆ. ನಮ್ಮ ಕ್ಷೇತ್ರದ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದೀರಿ. ಅದಕ್ಕೆ ಮಾನದಂಡವೇನು ಎಂದು ಪ್ರಶ್ನಿಸಿದರು.
    ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಕೆ.ಎಸ್.ವಿಜಯಾನಂದ ಅವರು ನನ್ನ ಸ್ನೇಹಿತ ಕೆ.ಎಸ್.ಸಚ್ಚಿದಾನಂದ ಅವರ ಪುತ್ರ. ಅವರ ಕುಟುಂಬ ಈ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆಯನ್ನು ಅರಿತು ಸ್ವಾಭಿಮಾನಕ್ಕೆ ಗೆಲುವು ಕೊಡಿ ಎಂದು ಮನವಿ ಮಾಡಿದರು.
    ವಿಜಯಾನಂದ ತಾಯಿ ಕುಸುಮಾ ಸಚ್ಚಿದಾನಂದ ಮಾತನಾಡಿ, ನನ್ನ ಮಗನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ಅವನು ಕೆಲಸಗಾರ, ತಮ್ಮ ತಾತನಂತೆಯೇ ಮಂಡ್ಯ ಅಭಿವೃದ್ಧಿಯಾಗಬೇಕೆಂಬ ಆಸೆಯಿಟ್ಟುಕೊಂಡವನು. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಮತನೀಡಿ ಗೆಲ್ಲಿಸಿಕೊಡಿ ಎಂದು ಕೈ ಮುಗಿದರು.
    ಸ್ವಾಭಿಮಾನಿ ಪಡೆ ಸದಸ್ಯರಾದ ಬಿ.ಲೋಕೇಶ್, ವಿಶಾಲ್ ರಘು, ಪುಟ್ಟಸ್ವಾಮಿಗೌಡ, ಎ.ಎಂ.ಅಣ್ಣಯ್ಯ, ಶಂಕರೇಗೌಡ, ಜಯಶೀಲ, ಜಬೀವುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts