More

  ಉಚಿತ ಸಾಮೂಹಿಕ ವಿವಾಹಕ್ಕೆ ಪ್ರಚಾರ ಸಮಿತಿ

  ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹಕ್ಕೆ ಬುಧವಾರ ಪ್ರಚಾರ ಸಮಿತಿಯನ್ನು ರಚಿಸಲಾಯಿತು.

  ಮ.ಬೆಟ್ಟದಲ್ಲಿ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 1989ರಿಂದಲೂ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿದ್ದು, 2014ರಿಂದ ಪ್ರಾಧಿಕಾರ ಆಡಳಿತ ಮುಂದುವರಿಸಿಕೊಂಡು ಬರುತ್ತಿದೆ. ಕಳೆದ ವರ್ಷ 60ಕ್ಕೂ ಹೆಚ್ಚು ವಧು- ವರರಿಂದ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಕೆಲವು ಕಾರಣಾಂತರದಿಂದ ನಿಗದಿಪಡಿಸಿದ್ದ ಉಚಿತ ಸಾಮೂಹಿಕ ವಿವಾಹದ ದಿನಾಂಕವನ್ನು 3 ಬಾರಿ ಬದಲಾವಣೆ ಮಾಡಲಾಗಿತ್ತು. ಇದರಿಂದ ಬೇಸತ್ತ ಅರ್ಜಿ ಸಲ್ಲಿಸಿದ್ದ ಕೆಲವರು ಸ್ವಂತ ಖರ್ಚಿನಲೇ ಊರು ಹಾಗೂ ಸಾಲೂರು ಬೃಹನ್ಮಠದಲ್ಲಿ ವಿವಾಹವಾಗಿದ್ದರು. ಇನ್ನು ಪ್ರಾಧಿಕಾರದ ವತಿಯಿಂದ ನಡೆದ ವಿವಾಹ ಕಾರ್ಯದಲ್ಲಿ 37 ಜೋಡಿಗಳು ಮಾತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  ಹಾಗಾಗಿ ಪ್ರಾಧಿಕಾರದ ಆಡಳಿತ ಈ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ಶ್ರಾವಣ ಮಾಸದಲ್ಲಿ ಸುಸೂತ್ರವಾಗಿ ನೆರವೇರಿಸಲು ನಿರ್ಧರಿಸಿದ್ದು, ಈ ಸಂಬಂಧ ಬುಧವಾರ ಮ.ಬೆಟ್ಟ ನಾಗಮಲೆ ಭವನದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅಧ್ಯಕ್ಷತೆಯಲ್ಲಿ ನೌಕರರ ಸಭೆ ನಡೆಯಿತು.

  ಈ ಸಭೆಯಲ್ಲಿ ನೌಕರರ ತಂಡ ಹಾಗೂ ವಾಹನವನ್ನು ಒಳಗೊಂಡಂತೆ ಪ್ರಚಾರ ಸಮಿತಿಯನ್ನು ರಚಿಸಲಾಗಿದ್ದು, ಉಚಿತ ಸಾಮೂಹಿಕ ವಿವಾಹ ಕುರಿತು ಚಾ.ನಗರ ಸೇರಿದಂತೆ ರಾಮನಗರ, ಕನಕಪುರ, ಬಿಡದಿ, ಅತ್ತಿಬೆಲೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಮೈಸೂರು ಹಾಗೂ ಇನ್ನಿತರೆ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲು ತೀರ್ಮಾನಿಸಲಾಯಿತು. ಜತೆಗೆ ಅಗತ್ಯ ಸಿದ್ಧತೆ ಸಂಬಂಧ ಚರ್ಚಿಸಲಾಯಿತು. ಈ ವೇಳೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಸಲಹೆ, ಸೂಚನೆಯನ್ನು ಪಡೆಯಲಾಯಿತು.

  ಹೆಚ್ಚು ಜೋಡಿ ಭಾಗಿಯಾಗಲಿ: ಈ ವೇಳೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕಳೆದ ವರ್ಷ ಕೆಲವು ಕಾರಣಾಂತರದಿಂದ ನಿಗದಿಪಡಿಸಿದ್ದ ಉಚಿತ ಸಾಮೂಹಿಕ ವಿವಾಹದ ದಿನಾಂಕವನ್ನು 3 ಬಾರಿ ಬದಲಾವಣೆ ಮಾಡಲಾಗಿತ್ತು. ಇದರಿಂದ ಅರ್ಜಿ ಸಲ್ಲಿಸಿದ್ದವರಲ್ಲಿ ಬೇಸರ ವ್ಯಕ್ತವಾಗಿತ್ತು. ಆದ್ದರಿಂದ ಈ ವರ್ಷ ದಿನಾಂಕವನ್ನು ಖಚಿತವಾಗಿ ನಿಗದಿಪಡಿಸಿ ವಿವಾಹ ಕಾರ್ಯವನ್ನು ಸುಸೂತ್ರವಾಗಿ ನೆರವೇರಿಸಬೇಕು. ಜತೆಗೆ ಈ ಸಂಬಂಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿ ಹೆಚ್ಚು ಜೋಡಿಗಳು ವಿವಾಹದಲ್ಲಿ ಭಾಗಿಯಾಗುವಂತೆ ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

  See also  ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ : ಮಾಜಿ ಸಚಿವ ಸೀತಾರಾಮ್ ವಿಶ್ವಾಸ

  ಇದೇ ವೇಳೆ ಕಾರ್ಯದರ್ಶಿ ಎ.ಈ.ರಘು ಮಾತನಾಡಿ, ಈ ವರ್ಷ 100 ಜೋಡಿಗಳು ವಿವಾಹವಾಗಬೇಕು ಎನ್ನುವ ಗುರಿಯನ್ನು ಹೊಂದಲಾಗಿದ್ದು, ಈ ಸಂಬಂಧ ಪ್ರಚಾರ ಸಮಿತಿ ರಚಿಸಲಾಗಿದೆ. ಶ್ರಾವಣ ಮಾಸದಲ್ಲಿ ನಡೆಸಲು ತೀರ್ಮಾನಿಸಿರುವ ಈ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಬೇಕಿದ್ದು, ಸಧ್ಯದಲ್ಲಿಯೇ ದಿನಾಂಕವನ್ನು ನಿಗದಿಪಡಿಸಲಾಗುವುದು. ಆದ್ದರಿಂದ ಪ್ರತಿಯೊಬ್ಬರಿಗೂ ನೀಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ಯಶಸ್ವಿ ವಿವಾಹ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ನೌಕರರಾದ ಮಹದೇವಸ್ವಾಮಿ, ಜನಾರ್ಧನ್, ಸ್ವಾಮಿ, ಶಾಸ್ತ್ರಿ ಹಾಗೂ ಇನ್ನಿತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts