ಬಿಎಸ್​ವೈ ವಿರುದ್ಧ ಸಿದ್ದು ವಾಗ್ದಾಳಿ

ಸಾವಳಗಿ: ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರದ ವೇಳೆ ಮಾತ್ರ ಹಸಿರು ಶಾಲು ಹಾಕ್ತಾರೆ. ಅಧಿಕಾರ ಸ್ವೀಕರಿಸಿದ ಬಳಿಕ ರೈತರ ಪರ ಕೆಲಸ ಮಾಡದೆ ಹಾವೇರಿಯಲ್ಲಿ ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ಮಾಡಿ ರೈತರನ್ನು ಕೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

ಸಮೀಪದ ತುಂಗಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಎದುರು ಬಿಜೆಪಿ ರಾಜ್ಯ ನಾಯಕರು ನಾಯಿಮರಿ ಹಾಗೆ ಇರ್ತಾರೆ. ಅಲ್ಲಿ ಇವರ ಆಟ ನಡೆಯೊಲ್ಲ. ಕೇಂದ್ರದಿಂದ ಯಾವೊಂದು ಯೋಜನೆ ರಾಜ್ಯಕ್ಕೆ ತಂದಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ರುವುದರಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲ ವಾಗಲಿದೆ. ಆಸೆ, ಆಮಿಷಗಳಿಗೆ ಬಲಿ ಯಾಗದೆ ಆನಂದ ನ್ಯಾಮಗೌಡ ಅವರನ್ನು ಬಹುಮತಗಳಿಂದ ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಮಾತನಾಡಿ, ಬಿಜೆಪಿಯ ವರಿಂದ ಶ್ರೀಕಾಂತ ಕುಲಕರ್ಣಿಗೆ ಶಾಂತಿ ಸಿಕ್ಕಿಲ್ಲ. ಜಮಖಂಡಿಯಲ್ಲಿ ಆನಂದನನ್ನು ಗೆಲ್ಲಿಸಿದರೆ ಖಂಡಿತ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಾರೆ. ಆರ್​ಎಸ್​ಎಸ್​ನವರು ನಿಮ್ಮ ಮನೆಗೆ ಬಂದರೆ ಜಾಗೃತರಾಗಿ. ಸಿದ್ದರಾಮಯ್ಯ ನವರು ಕೂಡ ಹಿಂದು ಎಂಬುದನ್ನು ಮರೆಯಬೇಡಿ ಎಂದರು. ಶಾಸಕ ಎಂ.ಬಿ. ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ಶಾಸಕ ಗಣೇಶ ಹುಕ್ಕೇರಿ, ಆನಂದ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ಆದಿನಾಥ ಸಕಳೆ ಇತರರಿದ್ದರು.