ಕ್ಯಾಂಪ್ ಪ್ರದೇಶದ ಕಸಾಯಿಖಾನೆ ಮುಚ್ಚಲು ಕ್ರಮ

ಬೆಳಗಾವಿ: ರಕ್ಷಣಾ ಇಲಾಖೆ ಜಾಗದಲ್ಲಿರುವ ಎಲ್ಲ ಕಸಾಯಿಖಾನೆಗಳನ್ನು ಮುಚ್ಚಲಾಗಿದೆ. ಕ್ಯಾಂಪ್ ಪ್ರದೇಶದ ಕಸಾಯಿಖಾನೆ ಯಾವುದೇ ಮುಲಾಜಿಲ್ಲದೇ ಮುಚ್ಚಲು ಕ್ರಮ ಜರುಗಿಸಲಾಗುವುದು ಎಂದು ದಂಡು ಮಂಡಳಿ ಅಧ್ಯಕ್ಷ ಹಾಗೂ ಬ್ರಿಗೇಡಿಯರ್ ಗೋವಿಂದ ಕಾಲವಾಡ ಸ್ಪಷ್ಟಪಡಿಸಿದ್ದಾರೆ.

ದಂಡು ಮಂಡಳಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಸಾಯಿಖಾನೆ ಸ್ಥಳಾಂತರಕ್ಕೆ ತಕ್ಷಣವೇ ಜಾಗ ಹುಡುಕಿ. ಇಲ್ಲದಿದ್ದರೆ ಮುಚ್ಚುವುದು ಅನಿವಾರ್ಯ ಎಂದು ತಿಳಿಸಿದರು.

ಸ್ವಚ್ಛತೆ ಕಾಪಾಡುವ ಹಾಗೂ ಸರ್ಕಾರಿ ನಿಯಮ ಪಾಲಿಸುವ ವ್ಯಾಪಾರಸ್ಥರ ಟ್ರೇಡ್ ಲೈಸೆನ್ಸ್ ನವೀಕರಿಸಿ. ಉಳಿದವರ ಅರ್ಜಿ ತಿರಸ್ಕರಿಸುವಂತೆ ಅಕಾರಿಗಳಿಗೆ ಸೂಚಿಸಿದರು. ಕಸಾಯಿಖಾನೆ ಸ್ಥಳಾಂತರಕ್ಕಾಗಿ ನಗರ ವ್ಯಾಪ್ತಿಯಲ್ಲಿ ಜಾಗ ಸಿಗುತ್ತಿಲ್ಲ. ತರಾತುರಿಯಲ್ಲಿ ಕಸಾಯಿಖಾನೆ ಮುಚ್ಚಲು ನಮ್ಮ ವಿರೋಧವಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ, ಮುಂದಿನ ಕ್ರಮ ಜರುಗಿಸುವಂತೆ ಸದಸ್ಯರು ಒತ್ತಾಯಿಸಿದರು. ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸ್ಥಳೀಯ ವ್ಯಾಜ್ಯಗಳ ಬಗ್ಗೆ ಚರ್ಚಿಸ ಲಾಯಿತು. ಸದಸ್ಯರಾದ ಸಾಜಿದ್ ಶೇಖ್, ಅಲ್ಲಾವುದ್ದೀನ್ ಕಿಲ್ಲೇದಾರ್, ಡಾ.ಮದನ ಡೊಂಗರೆ, ವಿಕ್ರಮ ಪುರೋಹಿತ, ಸಿಇಒ ವರ್ಚಸ್ವ, ಕ್ಯಾಪ್ಟನ್ ನಿತಿನಕುಮಾರ ಇತರರಿದ್ದರು.

ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಒಪ್ಪಿಗೆ ನೀಡಿದ್ದೇಕೆ?

ಕ್ಯಾಂಪ್ ಪ್ರದೇಶದ ಕಸಾಯಿಖಾನೆಯಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಸರ್ಕಾರದಿಂದ ಇದಕ್ಕೆ ಅನುದಾನವೂ ಬಿಡುಗಡೆಯಾಗಿದೆ. ಈಗ ಸ್ಥಳಾಂತರ ಬೇಡ ಎಂದರೆ ಹೇಗೆ? ಎಂದು ಸದಸ್ಯ ರಿಜ್ವಾನ್ ಬೇಪಾರಿ ಪ್ರಶ್ನಿಸಿದರು. ಈ ಘಟಕ ನಿರ್ಮಾಣದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅದನ್ನು ಮುಚ್ಚುವಂತೆ ಸ್ಥಳೀಯರು ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದಾರೆ. ಈ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಕಾಲವಾಡ ಖಡಕ್ಕಾಗಿ ಉತ್ತರಿಸಿದರು. ಆಗ ಕೆಲವು ಸದಸ್ಯರು ಏರುಧ್ವನಿಯಲ್ಲಿ ಮಾತನಾಡಲು ಮುಂದಾದಾಗ, ನೀವು ವ್ಯಾಪಾರಿ ದೃಷ್ಟಿಯಿಂದ ಮಾತನಾಡಬೇಡಿ. ಮಾನವೀಯತೆಯಿಂದ ವರ್ತಿಸಿ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಸಿಟ್ಟಾದ ಬೇಪಾರಿ ಹೊರನಡೆಯಲು ಮುಂದಾದಾಗ, ಸಭೆ ಪೂರ್ಣಗೊಳ್ಳುವವರೆಗೆ ನನ್ನ ಅನುಮತಿ ಪಡೆಯದೇ ಯಾರೂ ಹೊರಹೋಗುವಂತಿಲ್ಲ. ನಿಯಮ ಉಲ್ಲಂಸಿದರೆ ಸದಸ್ಯತ್ವ ರದ್ದುಗೊಳಿಸಬೇಕಾಗುತ್ತದೆ ಎಂದು ಬ್ರಿಗೇಡಿಯರ್ ಗೋವಿಂದ ಕಾಲವಾಡ ಎಚ್ಚರಿಕೆ ನೀಡಿದರು.