ಅಪಹರಣವಾಗಿದ್ದ 78 ವಿದ್ಯಾರ್ಥಿಗಳು, ಚಾಲಕನ ಬಿಡುಗಡೆ: ಇನ್ನಿಬ್ಬರು ಒತ್ತೆಯಾಳು

ಕ್ಯಾಮರೂನ್: ಪಶ್ಚಿಮ ಕ್ಯಾಮರೂನ್‌ ಬಾಮೆಂದಾನಿಂದ ಅಪಹರಿಸಲಾಗಿದ್ದ 78 ಮಕ್ಕಳು ಮತ್ತು ಚಾಲಕನನ್ನು ಅಪಹರಣಕಾರರು ಬಿಡುಗಡೆ ಮಾಡಿದ್ದು, ಶಾಲೆಯ ಪ್ರಿನ್ಸಿಪಾಲ್‌ ಮತ್ತು ಓರ್ವ ಶಿಕ್ಷಕನನ್ನು ಇನ್ನೂ ಒತ್ತೆಯಾಳುಗಳಾಗಿಟ್ಟುಕೊಂಡಿದ್ದಾರೆ.

ಅದೃಷ್ಟವಶಾತ್‌ 78 ಮಕ್ಕಳು ಮತ್ತು ಚಾಲಕನನ್ನು ಬಿಡುಗಡೆ ಮಾಡಿದ್ದು, ಪ್ರಿನ್ಸಿಪಾಲ್‌ ಮತ್ತು ಶಿಕ್ಷಕ ಸೇರಿ ಇನ್ನಿಬ್ಬರು ಅಪಹರಣಕಾರರೊಂದಿಗೆ ಇದ್ದಾರೆ. ಅವರ ಬಿಡುಗಡೆಗಾಗಿ ದೇವರನ್ನು ಪ್ರಾರ್ಥಿಸೋಣ ಎಂದು ಪ್ರೆಸ್ಬಿಟೇರಿಯನ್‌ ಚರ್ಚ್‌ನ ಸಚಿವ ಸ್ಯಾಮ್ಯುಯೆಲ್‌ ಫಾಂಕಿ ಹೇಳಿದ್ದಾರೆ.

ಇದಕ್ಕೂ ಮುನ್ನ 79 ವಿದ್ಯಾರ್ಥಿಗಳು ಅಪಹರಣಕ್ಕೊಳಗಾಗಿದ್ದಾರೆ ಎಂದಿದ್ದ ಅವರು ನಂತರ ಅವರಲ್ಲಿ ಓರ್ವ ಶಿಕ್ಷಕರಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

ದೇಶದ ವಾಯುವ್ಯ ಭಾಗದಲ್ಲಿ ಅಂಬಜೋನಿಯಾ ಪ್ರತ್ಯೇಕ ರಾಜ್ಯಕ್ಕಾಗಿ ಬೇಡಿಕೆ ಇಟ್ಟಿರುವ ಪ್ರತ್ಯೇಕತಾವಾದಿಗಳು ವಿದ್ಯಾರ್ಥಿಗಳನ್ನು ಅಪಹರಿಸಿದ್ದರು. ಬಳಿಕ ಅಂಬಾ ಬಾಯ್ಸ್‌ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಹರಿಸಿದ್ದ ಮಕ್ಕಳ ವಿಡಿಯೋ ಅಪ್‌ಲೋಡ್‌ ಮಾಡಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ವಿಡಿಯೋದಲ್ಲಿ ಮಕ್ಕಳಿಗೆ ತಾವು ಮತ್ತು ಪಾಲಕರ ಹೆಸರನ್ನು ಹೇಳುವಂತೆ ಒತ್ತಾಯಿಸಲಾಗುತ್ತಿತ್ತು. ‘ಅಂಬಾ ಬಾಯ್ಸ್‌’ ಹುಡುಗರನ್ನು ಅಪಹರಿಸಿದ್ದಾರೆ ಎಂದು ಹೇಳುತ್ತಿದ್ದರು. ಆದರೆ ಅವರು ಎಲ್ಲಿದ್ದರು ಎಂಬುದನ್ನು ಖಚಿತ ಪಡಿಸಿರಲಿಲ್ಲ. (ಏಜೆನ್ಸೀಸ್)

Leave a Reply

Your email address will not be published. Required fields are marked *