ಶಿಸ್ತು ಪಾಲನೆ ಮಾಡಿ ಅಂದ್ರೆ ನಿರಂಕುಶವಾದಿ ಅಂತಾರೆ: ನರೇಂದ್ರ ಮೋದಿ

ನವದೆಹಲಿ: ಶಿಸ್ತು ಪಾಲನೆ ಮಾಡಿ ಎಂದರೆ ಅದು ನಿರಂಕುಶವಾದಿ ಎಂಬ ಬ್ರ್ಯಾಂಡ್‌ ಆಗಿ ಮಾರ್ಪಡುತ್ತದೆ ಎಂದ ಪ್ರಧಾನಮಂತ್ರಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಶಿಸ್ತಿನ ಮನುಷ್ಯ ಎಂದು ಶನಿವಾರ ಶ್ಲಾಘಿಸಿದರು.

ಭಾರತದ ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿರುವ ನಾಯ್ಡು ಅವರು ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿ, ತಮಗೆ ಯಾವುದೇ ಜವಾಬ್ದಾರಿ ಲಭಿಸಿದರೂ ವೆಂಕಯ್ಯ ನಾಯ್ಡು ದೂರದರ್ಶಿವುಳ್ಳ ನಾಯಕತ್ವವನ್ನು ನೀಡಿದ್ದಾರೆ. ತನ್ನ ಜವಾಬ್ದಾರಿಯನ್ನು ಅತ್ಯಂತ ಸುಲಭ ಮತ್ತು ಶ್ರದ್ಧೆಯಿಂದ ನಿರ್ವಹಿಸಿದ್ದಾರೆ ಎಂದರು.

ವೆಂಕಯ್ಯ ನಾಯ್ಡು ಅವರು ತಮ್ಮ 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ 10 ವರ್ಷ ವಿದ್ಯಾರ್ಥಿ ರಾಜಕಾರಣ ಮತ್ತು ಇನ್ನುಳಿದ 40 ವರ್ಷಗಳನ್ನು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕೂಡ ತಮ್ಮ ಸರ್ಕಾರದಲ್ಲಿ ವೆಂಕಯ್ಯ ನಾಯ್ಡು ಅವರಿಗೆ ಸಚಿವ ಪಟ್ಟವನ್ನು ನೀಡಲು ಸಿದ್ಧರಿದ್ದರು. ಆದರೆ ನಾಯ್ಡು ಅವರು ಗ್ರಾಮೀಣ ಅಭಿವೃದ್ಧಿ ಸಚಿವರಾಗಲು ಬಯಸಿದ್ದರು. ವೆಂಕಯ್ಯ ಅವರು ರೈತರ ಹೃದಯದಲ್ಲಿದ್ದಾರೆ. ವೆಂಕಯ್ಯ ಅವರು ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಬದ್ಧರಾಗಿದ್ದಾರೆ ಎಂದು ತಿಳಿಸಿದರು.

‘ಮೂವಿಂಗ್​ ಆನ್​, ಮೂವಿಂಗ್​ ಫಾರ್ವರ್ಡ್​’ (Moving on, Moving forward: A year in office) ಶೀರ್ಷಿಕೆಯುಳ್ಳ 245 ಪುಟಗಳನ್ನೊಳಗೊಂಡ ಈ ಪುಸ್ತಕ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅಂದರೆ ಈ ಒಂದು ವರ್ಷದಲ್ಲಿ ಕೈಗೊಂಡ ಮಿಷನ್​ ಆಫ್ ಎಂಗೇಜ್​ಮೆಂಟ್​ನ ನಾಲ್ಕು ಪ್ರಮುಖ ಅಂಶಗಳ ಕುರಿತ ಪುಸ್ತಕವಾಗಿದೆ. (ಏಜೆನ್ಸೀಸ್​)