ಬೆಂಗಳೂರು:ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ವಿರುದ್ಧ ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ ಆಂದೋಲನಕ್ಕೆ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.
ಕೇವಲ ಒಂದು ವರ್ಷದಲ್ಲಿ ದಲಿತರಿಗೆ ಮೀಸಲಿಟ್ಟ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಅನುದಾನದಲ್ಲಿ 26,000 ಕೋಟಿ ಅನ್ಯೋಜನೆಗೆ ಪಿಕ್ ಪಾಕೆಟ್ ಮಾಡಿರುವುದು ಮತ್ತು ಗ್ಯಾರಂಟಿ ಯೋಜನೆಗೆ ದುರ್ಬಳಿಕೆ ಮಾಡಿಕೊಂಡಿದ್ದು, ಇದರ ವಿರುದ್ಧ ಆ.28 ರಂದು ನಗರದ ಫ್ರೀಡ್‌ಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ್ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಆರ್.ಭಾಸ್ಕರ್ ಪ್ರಸಾದ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ದಲಿತರ ವಿಚಾರದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರಕ್ಕೂ ಹಿಂದಿನ ಬಿಜೆಪಿ ಸರಕಾರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಈ ಹೋರಾಟವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಲು ತಿರ್ಮಾನಿಸಿದ್ದೇವೆ. ಈ ಸರ್ಕಾರದಲ್ಲಿ ಪ್ರತಿ ನಿತ್ಯ ದಲಿತರ ಮೇಲೆ ಕೊಲೆ ಮತ್ತು ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ರಕ್ಷಣೆಗೆ ಸರ್ಕಾರ ಮುಂದಾಗಿಲ್ಲ. ದೌರ್ಜನ್ಯ ಪ್ರಕರಣಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಹೇಳಿದ್ದರು ಆದರೆ, ಈವರೆಗೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಎಂದು ಆರೋಪಿಸಿದರು.
ಪಿಟಿಸಿಎಸ್ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿಲ್ಲ. ಪ್ರಬುದ್ಧ ಯೋಜನೆಯಡಿ ದಲಿತ ವಿದ್ಯಾರ್ಥಿಗಳಿಗೆ ಪರಮ ಅನ್ಯಾಯವಾಗುತ್ತಿದೆ. ಐಎಎಸ್ ಅಧಿಕಾರಿ ಮಣಿವಣ್ಣನ್ ದಲಿತ ವಿರೋಧಿಯಾಗಿದ್ದು, ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಉಸ್ತುವಾರಿ ಮುಂದುವರೆಸಿರುವುದು ಸರಿಯಲ್ಲ. ದಲಿತ ವಿದ್ಯಾರ್ಥಿವೇತನ, ವಿಧ್ಯಾರ್ಥಿ ನಿಲಯಗಳ ದುರಾವಸ್ಥೆ, ವಿಧ್ಯಾರ್ಥಿಗಳ ಉತ್ತೇಜನದಿಂದ ಮೀಸಲಾದ ನಗದು ಹಣ ದುರುಪಯೋಗವಾಗುತ್ತಿದೆ. ಪರಿಶಿಷ್ಠ ವರ್ಗಗಳಿಗೆ ಮೀಸಲಾದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು, ಒಳಮೀಸಲಾತಿ ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ್ ವ್ಯಕ್ತಪಡಿಸಿದರು.
ಹಕ್ಕು ಪತ್ರಕ್ಕಾಗಿ 94ಸಿ, ಫಾರಂ 53,57 ಅಡಿ ಹಾಕಿಕೊಂಡಿರುವ ದಲಿತರ ಅರ್ಜಿಗಳನ್ನು ಇನ್ನೂ ವಿಲೇವಾರಿ ಮಾಡಿಲ್ಲ. ಅರಣ್ಯ ಹಕ್ಕಿನಡಿ ಅರ್ಜಿ ಹಾಕಿರುವ ಬಡ ಕುಟುಂಬಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಹಕ್ಕು ಪತ್ರ ವಿತರಿಸಬೇಕು. ಬಲಾಢ್ಯರು ಒತ್ತುವರಿ ಮಾಡಿರುವ ಸರ್ಕಾರಿ ಭೂಮಿಗಳನ್ನು ತೆರವುಗೊಳಿಸಿ ಬಡಜನರಿಗೆ ನೆಲ ಮತ್ತು ನೆಲೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಚಾಲಕ ಪ್ರೊ. ಹರಿರಾಮ್, ಚಳುವಳಿ ರಾಜಣ್ಣ, ದಲಿತ ರಮೇಶ್, ಸಿದ್ದಾಪುರ ಮಂಜುನಾಥ್, ಶಂಕರ್ ರಾಮಲಿಂಗಯ್ಯ, ಮೋಹನ್‌ದಾಸರಿ, ನ್ಯಾಯವಾದಿ ಬಾಲನ್ ,ಸಿದ್ದಾರ್ಥ್ ಆನಂದ್ ಮಾಲೂರು ಉಪಸ್ಥಿತರಿದ್ದರು.