<ಕಾರ್ಕಳ-ಪಡುಬಿದ್ರಿ ರಸ್ತೆ ಇಕ್ಕೆಲಗಳಲ್ಲಿ ಅಗೆತ * ರಸ್ತೆಯಲ್ಲೇ ಮಣ್ಣಿನ ರಾಶಿ, ವಾಹನ ಸವಾರರಿಗೆ ಸಂಕಷ್ಟ>
ವಿಜಯವಾಣಿ ಸುದ್ದಿಜಾಲ ಬೆಳ್ಮಣ್/ಕಾರ್ಕಳ
ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1ರ ಇಕ್ಕೆಲಗಳಲ್ಲಿ ರಸ್ತೆಯಂಚನ್ನು ಖಾಸಗಿ ಸಂಸ್ಥೆಯೊಂದು ಕೇಬಲ್ ಅಳವಡಿಕೆಗಾಗಿ ಅಗೆದು ಹಾಕುತ್ತಿದೆ. ಅಗೆದ ಮಣ್ಣನ್ನು ರಸ್ತೆಗೆ ಹಾಕಿದ ಪರಿಣಾಮ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
ಕಾರ್ಕಳದಿಂದ ಪಡುಬಿದ್ರಿ ಸಾಗುವ ಸುಮಾರು 29 ಕಿ.ಮೀ ಉದ್ದದ ರಸ್ತೆಯ ಎರಡೂ ಬದಿಯಲ್ಲಿ ಅಗೆಯಲಾಗಿದೆ. ರಸ್ತೆ ಮೇಲೆಯೇ ಮಣ್ಣು ಹಾಕಿರುವುದರಿಂದ ಸಣ್ಣ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಕೇಬಲ್ ಅಳವಡಿಕೆ ನೆಪದಲ್ಲಿ ರಸ್ತೆ ಅಂಚನ್ನು ಅಗೆಯುವುದು ಎಷ್ಟು ಸರಿ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ರಸ್ತೆಯ ಎರಡು ಬದಿಯಲ್ಲಿ ಸುಮಾರು 30 ರಿಂದ 40 ಅಡಿಗಳಷ್ಟು ಜಾಗವಿದ್ದರೂ ಖಾಸಗಿ ಕಂಪನಿ ಕೇಬಲ್ ಅಳವಡಿಸುವ ಗುತ್ತಿಗೆದಾರರು ಮಾತ್ರ ಸುಂದರ ರಸ್ತೆಯ ಬುಡಕ್ಕೆ ಕೈ ಹಾಕಿದ್ದಾರೆ. ಇದರಿಂದ ಸುಂದರವಾದ ರಸ್ತೆಗೂ ಪೆಟ್ಟು ಬೀಳುತ್ತಿದೆ. ಇದರ ಹಿಂದೆ ಡಾಂಬರು ರಸ್ತೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ.
ರಾಜ್ಯ ಹೆದ್ದಾರಿ 5 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಇನ್ನೂ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿಲ್ಲ. ಆದರೂ ರಸ್ತೆಯ ಅಂಚುಗಳನ್ನು ಅಗೆಯುತ್ತಿರುವ ಗುತ್ತಿಗೆದಾರರು ಕ್ಯಾರೇ ಇಲ್ಲದಂತೆ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿದೆ.
ಚರಂಡಿ ಮಾಯ: ಕೇಬಲ್ ಅಳವಡಿಸುವ ನೆಪದಲ್ಲಿ ಕೆಲವೊಂದು ಕಡೆ ರಸ್ತೆ ಪಕ್ಕದಲ್ಲೇ ಅಗೆದರೆ ಇನ್ನೂ ಕೆಲವೆಡೆ ಮಳೆ ನೀರು ಹರಿದು ಹೋಗುವ ಚರಂಡಿಯನ್ನೇ ಅಗೆದು ಹಾಕಿದ್ದಾರೆ. ಇದರಿಂದ ಮಳೆಗಾಲದಲ್ಲಿ ಮಳೆ ನೀರು ಹರಿಯಲು ಜಾಗವಿಲ್ಲದಂತ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಕೆಲವೊಂದು ಕಡೆ ಮಣ್ಣು ಅಗೆದು ಹಾಕಿದ್ದರಿಂದ ಚರಂಡಿಗಳು ಸಂಪೂರ್ಣ ಮುಚ್ಚಿಹೋಗಿದ್ದು ಸಮಸ್ಯೆ ಸೃಷ್ಟಿಸುತ್ತಿದೆ.
ಅಧಿಕಾರಿ, ಜನಪ್ರತಿನಿಧಿಗಳು ಮೌನ: ಮಣ್ಣನ್ನು ಅಗೆದು ರಸ್ತೆಗೆ ಸುರಿದು ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದರೂ, ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮಾತೇ ಎತ್ತುತ್ತಿಲ್ಲ. ಮಣ್ಣು ರಸ್ತೆಗೆ ಹಾಕಿರುವುದರಿಂದ ವಾಹನ ಸವಾರರು ಸಂಕಟ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಎಚ್ಚರಿಸುವಲ್ಲಿ ವಿಫಲರಾಗಿದ್ದಾರೆ.
ತಾಪಂನಲ್ಲೂ ಪ್ರತಿಧ್ವನಿ: ಮೊಬೈಲ್ ಕಂಪನಿಗಳ ಅವಾಂತರ ಕುರಿತು ತಾಪಂ ಸಾಮಾನ್ಯಸಭೆಗಳಲ್ಲೂ ಪ್ರಸ್ತಾಪಗೊಂಡಿದೆ.ಕೇಬಲ್ ಅಳವಡಿಕೆಯಿಂದ ರಸ್ತೆ ಹದಗೆಟ್ಟರೆ ಅದಕ್ಕೆ ಕಾಮಗಾರಿ ವಹಿಸಿಕೊಂಡವರು ಹಾಗೂ ಮೊಬೈಲ್ ಕಂಪನಿಗಳೇ ಹೊಣೆಗಾರರು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸಭೆ ಗಮನಕ್ಕೆ ತಂದಿದ್ದರು.
ರಾತ್ರಿ ವೇಳೆ ವಾಹನದಲ್ಲಿ ಬರುವ ಸಂದರ್ಭ ಮಣ್ಣಿನ ಸರಿಯಾದ ಗೋಚರವಿಲ್ಲದೆ ಎಡವಟ್ಟು ಮಾಡಿಕೊಳ್ಳುವಂತಾಗಿದೆ. ರಸ್ತೆಯುದ್ದಕ್ಕೂ ಮಣ್ಣನ್ನು ಹರಡಿರುವುದು ಗುತ್ತಿಗೆದಾರನ ಬೇಜವಾಬ್ದಾರಿಗೆ ನಿದರ್ಶನ.
– ಸತೀಶ್, ಸಾಮಾಜಿಕ ಕಾರ್ಯಕರ್ತಯಾವುದೋ ಕೇಬಲ್ ಅಳವಡಿಕೆ ನೆಪದಲ್ಲಿ ಸುಂದರ ರಸ್ತೆಯನ್ನು ಅಗೆಯುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ. ರಸ್ತೆಯಂಚನ್ನು ಅಗೆಯುವುದರಿಂದ ರಸ್ತೆಗಳೂ ಕೆಲವೊಂದೆಡೆ ಬಿರುಕು ಬಿಟ್ಟಿದೆ.
– ನಾಗೇಶ್, ಅಡ್ವೆ ಸ್ಥಳೀಯರು.ಗುತ್ತಿಗೆದಾರರಿಗೆ ಸಮಸ್ಯೆಬಗ್ಗೆ ಮೂರು ಬಾರಿ ಎಚ್ಚರಿಕೆ ನೀಡಿದ್ದೇವೆ. ಸಮಸ್ಯೆ ಸರಿಪಡಿಸಿಕೊಡಲು ಗುತ್ತಿಗೆದಾರರು ಮುಂದಾಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ.
– ಮಿಥುನ್, ಕಿರಿಯ ಅಭಿಯಂತರರು, ಲೋಕೋಪಯೋಗಿ ಇಲಾಖೆಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಗುತ್ತಿಗೆದಾರರಿಗೆ ಮಣಿದು ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ಸಂದೇಹಕ್ಕೆ ಕಾರಣವಾಗುತ್ತಿದೆ.
– ಕ್ಸೇವಿಯರ್ ಡಿಮೆಲ್ಲೋ, ಬೆಳ್ಮಣ್ ಸಾಮಾಜಿಕ ಕಾರ್ಯಕರ್ತ