ಬೆಂಗಳೂರು: ಬಿಜೆಪಿ ಆಡಳಿತಾವಧಿಯ ಕೋವಿಡ್ ಅಕ್ರಮದ ಕುರಿತು ನ್ಯಾ.ಮೈಕೆಲ್ ಡಿ.ಕುನ್ಹಾ ತನಿಖೆ ನಡೆಸಿ ಸಲ್ಲಿಸಿದ ಮಧ್ಯಂತರ ವರದಿ ಪರಿಶೀಲನೆಗೆ ನ.20ರ ಬಳಿಕ ಸಚಿವ ಸಂಪುಟದ ಉಪ ಸಮಿತಿ ಸಭೆ ಸೇರಲಿದೆ ಎಂದು ಸಮಿತಿ ಸದಸ್ಯರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಉಪ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸದಸ್ಯರಾದ ನಾನು, ಎಂ.ಬಿ.ಪಾಟೀಲ್ ಮತ್ತಿತರರು ಮೂರು ಕ್ಷೇತ್ರಗಳ ಉಪ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರಿಂದ ಸಭೆ ಸೇರಿಲ್ಲ. 20ರ ಬಳಿಕ ಸಭೆ ನ್ಯಾ.ಕನ್ಹಾ ವರದಿ ಪರಿಶೀಲಿಸಿ ಸೂಕ್ತ ಕ್ರಮದ ಶಿಫಾರಸುಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದರು.
ಜೋಶಿ ಹೇಳಿಕೆಗೆ ಆಕ್ಷೇಪ
ನ್ಯಾ.ಕುನ್ಹಾ ಅವರನ್ನು ಕಾಂಗ್ರೆಸ್ ಏಜೆಂಟರಂತೆ ವರ್ತನೆ ಮಾಡಬಾರದು ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ ಸರಿಯಲ್ಲ. ಹಿರಿಯರು, ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರ ಬಗ್ಗೆ ಇಂತಹ ಪದ ಬಳಕೆ ಜೋಶಿಯವರಿಗೆ ಶೋಭಿಸುವುದಿಲ್ಲ ಎಂದು ಆಕ್ಷೇಪಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಅಕ್ರಮಗಳಾಗಿವೆ ಎಂದು ಪ್ರತಿಪಕ್ಷವಾಗಿ ಕಾಂಗ್ರೆಸ್ ಆಪಾದಿಸಿತ್ತು. ಅಧಿಕಾರಕ್ಕೆ ಬಂದ ನಂತರ ಈ ಆರೋಪಗಳ ತನಿಖೆಗೆ ನ್ಯಾ.ಕುನ್ಹಾ ಆಯೋಗವನ್ನು ತನಿಖೆಗೆ ನೇಮಿಸಲಾಗಿದೆ.
ಕೋವಿಡ್ ನಿರ್ವಹಣೆಗೆ ಪರಿಕರಗಳ ಖರೀದಿಯಲ್ಲಿ ಅಕ್ರಮಗಳಾಗಿವೆ ಎಂದು ವಾಸ್ತವಿಕ ಅಂಶಗಳನ್ನು ಆಧರಿಸಿ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಸ್ಥಳಿಯವಾಗಿ 200 ರಿಂದ 300 ರೂ.ಗೆ ಸಿಗುತ್ತಿದ್ದ ಪಿಪಿಇ ಕಿಟ್ ಗಳಿಗೆ ಎರಡರಿಂದ ಮೂರು ಸಾವಿರ ರೂ ತೆತ್ತು ವಿದೇಶದಿಂದ ತರಿಸಿಕೊಂಡಿದ್ದಕ್ಕೆ 14 ಕೋಟಿ ರೂ. ನಷ್ಟವಾಗಿದೆ ಎಂದಿರುವುದು ಒಂದು ಉದಾಹರಣೆಯಷ್ಟೇ. ಬೇರೆ ಪರಿಕರಗಳ ಖರೀದಿ ಸೇರಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಪುರಾವೆ ಒದಗಿಸಿದರೆ ತನಿಖೆ
ಅಬಕಾರಿ ಇಲಾಖೆಯಲ್ಲಿ ಹಗರಣವಾಗಿದೆ. ಮದ್ಯ ವ್ಯಾಪಾರಿಗಳಿಂದ 700 ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ವಸೂಲಿ ಮಾಡಿ ಮಹಾರಾಷ್ಟ್ರ ಚುನಾವಣೆಗೆ ಕಳುಹಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತಳ್ಳಿ ಹಾಕಿದರು.
ಯಾರೋ ಸಣ್ಣಪುಟ್ಟ ಮುಖಂಡರು ಹೀಗೆ ಹೇಳಿದ್ದರೆ ತಕ್ಕ ಉತ್ತರ ನೀಡುತ್ತಿದ್ದೆವು. ಪ್ರಧಾನಿಯಾದವರು ಪುರಾವೆ ಇಲ್ಲದೆ ಆಪಾದನೆ ಮಾಡಬಾರದು. ಪುರಾವೆಗಳನ್ನು ಒದಗಿಸಿದರೆ ತನಿಖೆ ನಡೆಸಿ ಕ್ರಮವಹಿಸಲು ಸರ್ಕಾರ ಬದ್ಧವಾಗಿದೆ. ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿಗೆ ಚುನಾವಣೆ ನಡೆಸುವಷ್ಟು ಶಕ್ತಿ ಮತ್ತು ಸಾಮರ್ಥ್ಯವಿದ್ದು, ಕರ್ನಾಟಕದಿಂದ ಹಣ ಕಳುಹಿಸಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಮಹಾರಾಷ್ಟ್ರದಲ್ಲಿನ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ ಒಳಗೊಂಡ ಸಮ್ಮಿಶ್ರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಲ್ಲಿನ ಜನರು ರೋಸಿ ಹೋಗಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡುವುದು ಬಿಟ್ಟು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕಡೆಗೆ ಬೊಟ್ಟು ಮಾಡಿದ್ದಾರೆ. ಮಹಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್, ಎನ್ ಸಿಪಿ, ಉದ್ಧವ್ ಠಾಕ್ರೆಯವರ ಶಿವಸೇನಾ ಸೇರಿದ ಕೂಟಕ್ಕೆ ಜನ ಬೆಂಬಲ ದೊರೆತು ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದರು.