ಬೆಂಗಳೂರು: ಸಂಪುಟ ವಿಸ್ತರಣೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಇದ್ದು, ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಆಗುತ್ತದೆ ಎನ್ನುವ ಆಶಾಭಾವನೆಯೂ ಕರಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜ.18ಕ್ಕೆ ಹುಬ್ಬಳ್ಳಿಗೆ ಬರುತ್ತಿದ್ದು, ಅಲ್ಲಿಯೇ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿರುವ ಕಾರಣ, ಅಲ್ಲಿಯವರೆಗೆ ಸಂಪುಟ ಸಮಸ್ಯೆ ಇತ್ಯರ್ಥಗೊಳ್ಳುವಂತೆ ಕಾಣುತ್ತಿಲ್ಲ. ಹುಬ್ಬಳ್ಳಿ ಸಮಾವೇಶದಲ್ಲಿ ಸಿಎಂ, ಅಮಿತ್ ಷಾ ಅವರನ್ನು ಭೇಟಿಯಾದರೂ ಅಷ್ಟು ಸಾರಾಸಗಟಾಗಿ ಒಪ್ಪಿಗೆ ಕೊಡುವ ಲಕ್ಷಣಗಳಿಲ್ಲ. ಬದಲಿಗೆ ದಾವೋಸ್ ಸಮಾವೇಶ ಮುಗಿದ ಬಳಿಕ ಚರ್ಚೆ ಮಾಡೋಣ ಎಂದು ಮತ್ತೆ ಮುಂದೂಡುವ ಸಾಧ್ಯತೆಗಳು ದಟ್ಟವಾಗಿವೆ. ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಬರುವುದಾಗಿ ಕೇಂದ್ರ ನಾಯಕರಿಗೆಲ್ಲ ಸಿಎಂ ಮಾಹಿತಿ ರವಾನಿಸಿದಾಗಲೆಲ್ಲ ಅದಕ್ಕೆ ರೆಡ್ ಸಿಗ್ನಲ್ ತೋರಿಸುತ್ತಲೇ ಇದ್ದಾರೆ. ಇದರ ಹಿಂದೆ ಇರುವ ನಿಜ ಕಾರಣ ಏನು ಎನ್ನುವುದು ಬಿಜೆಪಿ ನಾಯಕರಿಗೆಲ್ಲ ಯಕ್ಷ ಪ್ರಶ್ನೆಯಾಗಿದೆ.
ಎರಡು ಹಂತದ ವಿಸ್ತರಣೆ: ಈಗಾಗಲೇ ಸಚಿವರಾಗಿರುವವರಲ್ಲಿ ಏಳೆಂಟು ಜನರನ್ನು ಕೈಬಿಡುವ ಲೆಕ್ಕಾಚಾರವೂ ಬಿಜೆಪಿಯಲ್ಲಿ ನಡೆದಿದೆ. ಈಗಲೇ ಅವರನ್ನು ಕೈ ಬಿಟ್ಟರೆ ತಪ್ಪಾಗುತ್ತದೆ. ಇನ್ನೊಂದೆರಡು ತಿಂಗಳು ಹೇಗೋ ನಿಭಾಯಿಸಿ ಬಳಿಕ ಅವರನ್ನು ಸಂಪುಟದಿಂದ ಕೈ ಬಿಡುವುದು ಸೂಕ್ತ ಎನ್ನುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಎರಡು ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಲು ಅವಕಾಶ ಕೊಡುವಂತೆ ವರಿಷ್ಠರ ಮುಂದೆ ಪ್ರಸ್ತಾವನೆ ಸಲ್ಲಿಸಲು ಸಿಎಂ ಮುಂದಾಗಿದ್ದಾರೆ. ಮೊದಲು 11 ಅರ್ಹ ಶಾಸಕರನ್ನು ಸಚಿವರನ್ನಾಗಿ ಮಾಡಿ ಕೊಟ್ಟ ಮಾತನ್ನು ಉಳಿಸಿ ಕೊಳ್ಳಲು ಸಿಎಂ ಗಟ್ಟಿ ನಿರ್ಧಾರ ಮಾಡಿದ್ದಾರೆ. ಬಳಿಕ ಮತ್ತೊಂದು ಹಂತದಲ್ಲಿ ಸಂಪುಟ ವಿಸ್ತರಣೆ ಮಾಡುವುದರಿಂದ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ಸಲಹೆಗಳ ಹಿನ್ನೆಲೆಯಲ್ಲಿ ಈ ತೀರ್ವನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಫೆಬ್ರವರಿ ಮೊದಲ ವಾರ
ಲಭ್ಯವಿರುವ ಮಾಹಿತಿ ಪ್ರಕಾರ ಫೆಬ್ರವರಿ ಮೊದಲ ವಾರ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ವಿಧಾನಸಭೆ ಅಧಿವೇಶನ ಮೊದಲೇ ಸಂಪುಟ ಕಗ್ಗಂಟು ಬಗೆಹರಿಯಲಿದೆ. ವರಿಷ್ಠರು ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದ್ದಾರೆ. ಆದರೆ ಅದರ ಹಿಂದೆ ಇರುವ ರಹಸ್ಯ ಏನು ಎನ್ನುವುದು ನಮಗೂ ತಿಳಿಯುತ್ತಿಲ್ಲ ಎನ್ನುವುದು ಬಿಜೆಪಿ ಮುಖಂಡರ ಅಭಿಪ್ರಾಯ. ಸಂಪುಟ ವಿಸ್ತರಣೆ ತೀರಾ ವಿಳಂಬವಾದರೆ ಬಿಜೆಪಿಯೊಳಗೆ ಭಿನ್ನಮತ ಭುಗಿಲೆದ್ದರೆ ಏನು ಮಾಡುವುದು ಎನ್ನುವ ಆತಂಕವೂ ಮುಖ್ಯಮಂತ್ರಿಗಳನ್ನು ಕಾಡುತ್ತಿದೆ.