ಕೈ ಗೊಂದಲದ ಗೂಡು

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಗರಿಗೆದರುತ್ತಿದ್ದಂತೆ ಕಾಂಗ್ರೆಸ್​ನಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ. ಅ.10 ಅಥವಾ 12ರಂದು ಸಂಪುಟ ವಿಸ್ತರಣೆ ನಡೆಸುವ ಬಗ್ಗೆ ಕೈ ಮುಖಂಡರು ಮತ್ತು ಸಿಎಂ ಕುಮಾರಸ್ವಾಮಿ ನಡುವೆ ಚರ್ಚೆ ನಡೆದಿದ್ದು, ಸಚಿವರಾಗುವವರ ಯಾದಿ ಅಂತಿಮಗೊಳ್ಳಬೇಕಷ್ಟೇ.

ಕಾಂಗ್ರೆಸ್ ಪಾಲಿಗಿರುವ ಆರು, ಜೆಡಿಎಸ್​ನ ಒಂದು ಸ್ಥಾನವನ್ನು ಒಟ್ಟಿಗೆ ಭರ್ತಿ ಮಾಡುವುದೇ ಒಳಿತೆಂಬ ದಳಪತಿಗಳ ಸಲಹೆಗೆ ಕಾಂಗ್ರೆಸ್​ನಲ್ಲಿ ಸಹಮತ ಇಲ್ಲ ಎಂಬುದು ಬೇರೆ ಮಾತು. ಇರುವ ಆರು ಸ್ಥಾನದಲ್ಲಿ ನಾಲ್ಕು ಅಥವಾ ಐದನ್ನಷ್ಟೇ ಭರ್ತಿ ಮಾಡಲು ಕಾಂಗ್ರೆಸ್ ನಾಯಕರು ಆಶಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ, ಈ ರೀತಿ ನಿರ್ಧಾರ ಮಾಡಿದರೆ ಗೊಂದಲ ಮುಂದುವರಿದು ಸರ್ಕಾರಕ್ಕೆ ಸವಾಲು ಎದುರಾಗಬಹುದು ಎಂದು ಕುಮಾರಸ್ವಾಮಿ ಅಭಿಪ್ರಾಯ ಮಂಡಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಇರುವ 6 ಸ್ಥಾನಕ್ಕೆ ಕಾಂಗ್ರೆಸ್​ನಲ್ಲಿ 22 ಆಕಾಂಕ್ಷಿಗಳಿದ್ದು, 12 ಮಂದಿ ಪ್ರಬಲ ಪೈಪೋಟಿಯೊಡ್ಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಿರಂತರ ಸಂಪರ್ಕದಲ್ಲಿರುವ ಸಚಿವಾಕಾಂಕ್ಷಿಗಳು ತಮ್ಮ ಪರ ಬ್ಯಾಟ್ ಮಾಡುವಂತೆ ಕೋರಿಕೆ ಇಡುತ್ತಿದ್ದಾರೆ. ಸೋಮವಾರ ಅತೃಪ್ತ ಶಾಸಕ ಎಂ.ಟಿ.ಬಿ.ನಾಗರಾಜ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಸಚಿವ ಸ್ಥಾನ ನೀಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.