ಸಂಪುಟ ವಿಸ್ತರಣೆ ಕುರಿತು ಎಚ್​ಡಿಡಿ-ಸಿದ್ದು ಸಭೆ

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಕಗ್ಗಂಟು ಬಿಡಿಸುವ ಉದ್ದೇಶದಿಂದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಸಭೆ ನಡೆಸಿರುವುದು ಮಿತ್ರಪಕ್ಷಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸಂಪುಟ ವಿಸ್ತರಣೆ ಆಗುವುದೇ ಅನುಮಾನವೆಂಬ ಭಾವನೆ ಆಕಾಂಕ್ಷಿಗಳಲ್ಲಿ ಬೇರೂರಲಾರಂಭಿಸಿತ್ತು. ಕಾಂಗ್ರೆಸ್​ನ ಕೆಲ ಹಿರಿಯ ಶಾಸಕರು ಪ್ರತ್ಯೇಕ ಸಭೆ ನಡೆಸಿ ಹೈಕಮಾಂಡ್ ಭೇಟಿಗೂ ಸಿದ್ದರಾಗಿದ್ದರು. ಇನ್ನೂ ಮುಂದೂಡುತ್ತಿದ್ದರೆ ಪರಿಸ್ಥಿತಿ ಬಿಗಡಾಯಿಸಬಹುದೆಂಬ ಆತಂಕದಿಂದ ಇಬ್ಬರು ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದರೆಂದು ಹೇಳಲಾಗಿದೆ.

ವಿವಿಧ ನೆಪ ಹೇಳಿ 5 ಬಾರಿ ಮುಂದೂಡಿರುವ ಸಂಪುಟ ವಿಸ್ತರಣೆ ಇನ್ನೂ ಮುಂದೂಡಿದರೆ ಸಂಕಷ್ಟಗಳು ಎದುರಾಗಬಹುದೆಂಬ ಕಾರಣಕ್ಕೆ ಎರಡೂ ಪಕ್ಷದ ನಾಯಕರು ಒಟ್ಟಾಗಿ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಸಭೆ ಬಳಿಕ ಎಚ್.ಡಿ. ದೇವೇಗೌಡ ಮಾತನಾಡಿ, ಸಂಪುಟ ವಿಸ್ತರಣೆ ಮತ್ತು ನಿಗಮ-ಮಂಡಳಿ ನೇಮಕ ಬಗ್ಗೆ ಚರ್ಚೆ ನಡೆಸಿದೆವು. ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದರು. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತೇವೆ, ಆ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ ಎಂದು ಸಿದ್ದರಾಮಯ್ಯ ಸಹ ಸ್ಪಷ್ಟಪಡಿಸಿದರು.

ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು? ವಿಸ್ತರಣೆ ಮಾಡಿದರೆ ಎದುರಾಗಬಹುದಾದ ಸವಾಲುಗಳೇನು? ಅಧಿವೇಶನ ಬಳಿಕ ವಿಸ್ತರಣೆ ಸೂಕ್ತವೇ? ಆಕಾಂಕ್ಷಿಗಳ ಒತ್ತಡ ಯಾವ ಮಟ್ಟಿಗಿದೆ? ಇರುವ ಲಭ್ಯತೆಯಲ್ಲಿ ಎಷ್ಟು ಸ್ಥಾನ ತುಂಬಿಕೊಂಡರೆ ಸೂಕ್ತ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ನ. 28ರಂದು ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಕಾಂಗ್ರೆಸ್ ಒಲವು ವ್ಯಕ್ತಪಡಿಸಿತ್ತು. ಆದರೆ, ಒಮ್ಮತ ಮೂಡಿಲ್ಲ ಎನ್ನಲಾಗಿದೆ. ಮೊದಲು ಸಮನ್ವಯ ಸಮಿತಿ ನಡೆಯಲಿ, ಅಲ್ಲೇ ದಿನಾಂಕ ನಿಶ್ಚಯವಾದರೆ ಒಳಿತು ಎಂಬ ನಿರ್ಧಾರಕ್ಕೆ ಬರಲಾಗಿದೆ.

ಡಿ.10ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ವಿಸ್ತರಣೆ ಅಧಿವೇಶನಕ್ಕೆ ಮೊದಲು ಮಾಡಬೇಕೇ, ನಂತರ ಮಾಡಬೇಕೇ? ಎಂಬುದು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ. ಆದರೆ ಸಮನ್ವಯ ಸಮಿತಿ ಸಭೆ ಯಾವಾಗ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.

ಕಬ್ಬಿನ ಬಗ್ಗೆ ನಡೆಯದ ಚರ್ಚೆ

ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವಿನ ಸಭೆಯಲ್ಲಿ ಕಬ್ಬು ಬೆಳೆಗಾರರು ನಡೆಸಿರುವ ಹೋರಾಟದ ಬಗ್ಗೆ ಚರ್ಚೆಯಾಗಿಲ್ಲ ಎಂಬುದನ್ನು ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ನಮ್ಮಿಬ್ಬರ ಬಳಿಯಲ್ಲಿ ಅಧಿಕಾರ ಇಲ್ಲದ್ದರಿಂದ ಆ ಬಗ್ಗೆ ಚರ್ಚೆ ನಡೆಸಿಲ್ಲ. ಸರ್ಕಾರ ನೋಡಿಕೊಳ್ಳುತ್ತದೆ ಎಂದು ದೇವೇಗೌಡರು ಹೇಳಿದರು. ಆ ಬಗ್ಗೆ ಕುಮಾರಸ್ವಾಮಿ ಜತೆ ಮಾತುಕತೆ ನಡೆಸುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.