More

    ಸಾಂವಿಧಾನಿಕ ಪೀಠಕ್ಕೆ ಸಿಎಎ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರಶ್ನಿಸಿ 140 ಅರ್ಜಿಗಳು ಸಲ್ಲಿಕೆಯಾಗಿದ್ದರೂ, ಸದ್ಯದ ಮಟ್ಟಿಗೆ ಕಾನೂನಿಗೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದ್ದು, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್​ಪಿಆರ್) ಪ್ರಕ್ರಿಯೆಯನ್ನೂ ಮುಂದಕ್ಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ, ಸಿಎಎ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಒಳಗೊಂಡ ತ್ರಿಸದಸ್ಯ ಹೇಳಿದೆ.

    ಡಿಸೆಂಬರ್ ಮತ್ತು ನಂತರದ ದಿನಗಳಲ್ಲಿ ಸಲ್ಲಿಕೆಯಾಗಿದ್ದ ಎಲ್ಲಾ ತಕರಾರು ಅರ್ಜಿಗಳಿಗೆ ಸಂಬಂಧಿಸಿದಂತೆ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ 4 ವಾರಗಳ ಗಡುವು ನೀಡಿರುವ ಸುಪ್ರೀಂಕೋರ್ಟ್, ಕಾನೂನನ್ನು ಯಾವೆಲ್ಲಾ ಕಾರಣಗಳಿಗಾಗಿ ಪ್ರಶ್ನಿಸಲಾಗಿದೆ ಎಂಬುದನ್ನು ವಿಸõತವಾಗಿ ಪಟ್ಟಿ ಮಾಡಬೇಕೆಂದು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಗೆ ನಿರ್ದೇಶನ ನೀಡಿದೆ. ಈ ಪ್ರಕರಣದಲ್ಲಿ ಅಸ್ಸಾಂ ಮತ್ತು ತ್ರಿಪುರಾಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕು ಎಂಬ ಬೇಡಿಕೆ ಒಪ್ಪಿಕೊಂಡಿರುವ ನ್ಯಾಯಪೀಠ, ವಿಚಾರಣೆ ಸಂದರ್ಭದಲ್ಲೇ ನಿಮ್ಮ ವಾದಗಳನ್ನು ಆಲಿಸಲಾಗುವುದು ಎಂದು ಹೇಳಿದೆ. ಹಾಗೇ ಸಣ್ಣಪುಟ್ಟ ವಿಷಯಗಳನ್ನು ಕೋರ್ಟ್ ಚೇಂಬರ್ ನಲ್ಲೇ ಇತ್ಯರ್ಥಪಡಿಸುವುದಾಗಿಯೂ ತಿಳಿಸಲಾಗಿದೆ. 4 ವಾರಗಳ ಬಳಿಕ ನಿತ್ಯವೂ ವಿಚಾರಣೆ ನಡೆಸುವ ಸುಳಿವನ್ನು ನ್ಯಾಯಪೀಠ ನೀಡಿದೆ.

    ಅಸ್ಸಾಂ ಮತ್ತು ತ್ರಿಪುರಾ ಜನರ ಪೌರತ್ವಕ್ಕೆ ಸಂಬಂಧಿಸಿದಂತೆ ಭಾರತ ಪ್ರವೇಶಿಸಿದ ಕೊನೆಯ ದಿನಾಂಕವನ್ನು 1948ರಿಂದ 1971ಕ್ಕೆ ವಿಸ್ತರಿಸಿದ್ದನ್ನು ಪ್ರಶ್ನಿಸಲಾಗಿದೆ ಮತ್ತು ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಯಾಗಬೇಕು ಎಂಬ ಕೋರಿಕೆಯ ವಿಚಾರಣೆ ಬಾಕಿ ಇದೆ ಎಂದು ವಿಚಾರಣೆ ವೇಳೆ ವಕೀಲ ವಿಕಾಸ್ ಸಿಂಗ್ ಗಮನಸೆಳೆದರು. ಹಿರಿಯ ವಕೀಲ ರಾಜೀವ್ ಧವನ್, ಈ ಪ್ರಕರಣವನ್ನು ಸಾಂವಿಧಾನಿಕ ಪೀಠ ವಿಚಾರಣೆ ನಡೆಸುವ ಅಗತ್ಯವಿದೆಯೇ ಮತ್ತು ಪೌರತ್ವ ತಿದ್ದುಪಡಿ ಕಾನೂನು ಜಾರಿಯಾದ ಮೇಲೆ ಅದನ್ನು ಬದಲಾವಣೆ ಮಾಡಲು ಸಾಧ್ಯವಾಗದ ಸನ್ನಿವೇಶ ನಿರ್ವಣವಾಗುತ್ತದೆಯೇ ಎಂಬ 2 ಅಂಶಗಳ ಬಗ್ಗೆ ತೀರ್ಮಾನ ವಾಗಬೇಕು ಎಂದು ಸಲಹೆ ನೀಡಿದರು.

    9 ಸದಸ್ಯರ ಸಾಂವಿಧಾನಿಕ ಪೀಠ ಶಬರಿಮಲೆ ಪ್ರಕರಣದ ವಿಚಾರಣೆ ನಡೆಸುತ್ತಿದೆ ಎಂದು ನ್ಯಾಯಪೀಠ ಪ್ರತಿಕ್ರಿಯಿಸಿದಾಗ, ಕೋರ್ಟ್ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿದರು.

    ಹೈಕೋರ್ಟ್​ಗಳಲ್ಲಿ ಸಿಎಎ ವಿಚಾರಣೆ ಬೇಡ

    ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ಎಲ್ಲಾ ಅರ್ಜಿಗಳ ವಿಚಾರಣೆ ನಾವು ನಡೆಸಲಿದ್ದೇವೆ. ದೇಶದ ಇನ್ಯಾವುದೇ ಹೈಕೋರ್ಟ್​ಗಳು ಸಿಎಎಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುವುದು ಬೇಡ ಎಂದು ಸಿಜೆಐ ಎಸ್.ಎ.ಬೊಬ್ಡೆ ಆದೇಶ ನೀಡಿದ್ದಾರೆ.

    ಬಾಂಬೆ ಹೈಕೋರ್ಟ್ ನಕಾರ: ಸಿಎಎ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿತು. ಸುಪ್ರೀಂಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಈ ಅರ್ಜಿಗಳ ವಿಚಾರಣೆ ನಡೆಸುವುದಿಲ್ಲ ಎಂದು ಹೈಕೋರ್ಟ್​ನ ನಾಗ್ಪುರ ಪೀಠ ಸ್ಪಷ್ಟಪಡಿಸಿತು.

    ಎನ್​ಪಿಆರ್ ಮುಂದೂಡಲ್ಲ

    ಎನ್​ಪಿಆರ್ ಮುಂದಕ್ಕೆ ಹಾಕಬೇಕು ಎಂಬ ವಕೀಲ ಸಿಬಲ್ ಬೇಡಿಕೆಯನ್ನು ಕೋರ್ಟ್ ತಳ್ಳಿಹಾಕಿತು. ಎನ್​ಪಿಆರ್​ಗೆ ತಡೆ ನೀಡಿ ಎಂದು ನೇರವಾಗಿ ನೀವು ಕೇಳುತ್ತಿಲ್ಲ. ಬದಲಿಗೆ ಮುಂದಕ್ಕೆ ಹಾಕಿ ಎನ್ನುತ್ತಿದ್ದೀರಿ. ಎರಡೂ ಒಂದೇ ಅಲ್ಲವೇ ಎಂದು ನ್ಯಾಯಪೀಠ ಸಿಬಲ್​ಗೆ ಮರುಪ್ರಶ್ನೆ ಹಾಕಿತು.

    ಉತ್ತರ ಪ್ರದೇಶದಲ್ಲಿ ಯಾವುದೇ ನಿಯಮಗಳಿಲ್ಲದೆ ಸುಮಾರು 40 ಲಕ್ಷದಷ್ಟು ಜನರ ಪೌರತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ. 19 ಜಿಲ್ಲೆಗಳಿಗೆ ಇಂಥಾ ಸ್ಥಿತಿ ಉದ್ಭವಿಸಿದೆ. ಅವರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿ ಇದೆ. ದಯವಿಟ್ಟು ಪೌರತ್ವ ತಿದ್ದುಪಡಿ ಕಾನೂನಿಗೆ ತಡೆ ನೀಡಿ.

    | ಅಭಿಷೇಕ್ ಮನುಸಿಂಘಿ, ಅರ್ಜಿದಾರರ ಪರ ವಕೀಲರು (ವಿಚಾರಣೆ ವೇಳೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts