ತುಮಕೂರು:ಪೌರತ್ವ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ಪಾಕಿಸ್ತಾನ ಪರವಾಗಿದೆಯೋ…ಅಥವಾ ಭಾರತದ ಪರವಾಗಿದೆಯೋ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಶ್ನಿಸಿದರು.
ತುಮಕೂರು ವಿಶ್ವವಿದ್ಯಾಲಯ ಮುಂಭಾಗ ಅಶೋಕ ನಗರದಲ್ಲಿ ಭಾನುವಾರ ‘ಪೌರತ್ವ ತಿದ್ದುಪಡಿ ಕಾಯ್ದೆ’ ಪರವಾಗಿ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸುವ ಬಿಜೆಪಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಚೋದನಕಾರಿ ಹೇಳಿಕೆಗಳಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ದೇಶದ ಕಾನೂನಿಗೆ ಗೌರವ ಕೊಡುವಂತಹ ಮನೋಭಾವವನ್ನು ಎಲ್ಲರಲ್ಲೂ ಮೂಡಿಸುವ ಕೆಲಸ ಆಗಬೇಕಿದೆ ಎಂದರು. ಪಾಕಿಸ್ತಾನದಿಂದ ಬಂದು ನಮ್ಮ ದೇಶದಲ್ಲಿ ನೆಲೆಸಿದರೆ ಮುಂದೊಂದು ದಿನ ನಮ್ಮ ಮಕ್ಕಳಿಗೆ ಇರಲು ಮನೆ, ಊಟ, ವಿದ್ಯಾಭ್ಯಾಸ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ ಎಂದರು.
ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ನಮ್ಮ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ, ದೇಶದಲ್ಲಿ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ಸುಮಾರು ವರ್ಷಗಳಿಂದ ಹಲವಾರು ನಾಯಕರು ಪ್ರಯತ್ನಪಟ್ಟಿದ್ದರು ಎಂದರು.
ಪಾಕಿಸ್ತಾನ ಹಾಗೂ ಭಾರತ ವಿಭಜನೆಯಾದ ನಂತರ ಅನೇಕ ಅಲ್ಪಸಂಖ್ಯಾತರು ಭಾರತಕ್ಕೆ ಬಂದಿದ್ದಾರೆ. ವಿಭಜನೆ ನಂತರ 2ನೇ ದರ್ಜೆ ನಾಗರಿಕರ ಹಾಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಕೀಳಾಗಿ ಕಾಣಲಾಗುತ್ತಿದೆ. ಆ ನೋವು, ದಬ್ಬಾಳಿಕೆ ತಾಳಲಾರದೆ ಭಾರತಕ್ಕೆ ಬಂದಿದ್ದಾರೆ. ಯಾವುದೇ ಪೌರತ್ವ ಇಲ್ಲದೆ ಕಳೆದ 40 ವರ್ಷಗಳಿಂದ ಟೆಂಟ್‌ನಲ್ಲಿ ವಾಸಿಸುತ್ತಿದ್ದಾರೆ ಎಂದರು.
ಈ ಕಾಯ್ದೆ ಬಗ್ಗೆ ಮೊದಲು ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಾತನಾಡಿದ್ದರು, ಈಗ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ. ಏನೋ ಆಗಿ ಹೋಗುತ್ತದೆ ಎಂದು ಕಾಂಗ್ರೆಸ್‌ನವರು ಗುಲ್ಲೆಬ್ಬಿಸುತ್ತಿರುವುದರಲ್ಲಿ ಹುರುಳಿಲ್ಲ ಎಂದರು. ಈ ಕಾಯ್ದೆಯಲ್ಲಿ ನಮ್ಮ ದೇಶದಲ್ಲಿರುವ ಯಾರನ್ನೂ ಓಡಿಸುವಂತಿಲ್ಲ. ಪಾಕಿಸ್ತಾನದಿಂದ ಯಾರೂ ಬರುವಂತಿಲ್ಲ ಅಷ್ಟೆ. ಹೀಗಿರುವಾಗ ಈ ಕಾಯ್ದೆ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಏಕೆ ಎಂದು ಪ್ರಶ್ನಿಸಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಸುಮಾರು 2 ಕೋಟಿ ಜನ ದೇಶದಲ್ಲಿ ವಾಸ ಮಾಡುತ್ತಿದ್ದಾರೆ, ನಾವೂ ಕೂಡ ಅಮೆರಿಕ ಥರ ಇರಬೇಕು. ಈ ದೇಶ ನಮಗೆ ಮಾತ್ರ ಇರಬೇಕು. ಯಾರು ಬೇಕಾದರೂ ಬಂದು ಹೋಗಲು ಇದೇನು ತೋಟದಪ್ಪನ ಛತ್ರಾನಾ ಎಂದರು.
ಪಾಕಿಸ್ತಾನದಿಂದ ಬರುವವರೊಂದಿಗೆ ಉಗ್ರಗಾಮಿಗಳು ಬಂದಿದ್ದಾರೆ. ಅಂಥವರಿಂದಲೇ ಗಲಭೆಗಳು ನಡೆಯುತ್ತಿವೆ, ನಾವು ಇಲ್ಲಿರುವ ಯಾರ ದಾಖಲಾತಿಯನ್ನೂ ಕೇಳಿಲ್ಲ, ಕೇಳುವುದಿಲ್ಲ. ನಮ್ಮ ದೇಶದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದರು. ನಮ್ಮ ದೇಶವನ್ನು ಯಾವತ್ತೂ ಪಾಕಿಸ್ತಾನ ಮಾಡಲು ಸಾಧ್ಯವಿಲ್ಲ. ಹೊರಗಡೆಯಿಂದ ಬರುವವರನ್ನು ಸೇರಿಸುವ ಅವಶ್ಯಕತೆ ಇಲ್ಲ ಎಂಬುದು ಈ ಕಾಯ್ದೆಯ ಅಂಶವಾಗಿದೆ ಎಂದರು.
ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಪಾಲಿಕೆ ಸದಸ್ಯರಾದ ಸಿ.ಎನ್. ರಮೇಶ್, ಮಲ್ಲಿಕಾರ್ಜುನಯ್ಯ, ಬಿಜೆಪಿ ಮುಖಂಡರಾದ ಶಿಪವ್ರಸಾದ್, ಲಕ್ಷ್ಮೀಶ್, ಕೊಪ್ಪಲ್ ನಾಗರಾಜು, ಡಾ. ಸಂಜಯನಾಯಕ್ ಇದ್ದರು.
ಪೌರತ್ವ ಕಾಯ್ದೆ ಬಗ್ಗೆ ಎಲ್ಲೆಡೆ ಅಪಪ್ರಚಾರ ನಡೆಯುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಇದರ ಸತ್ಯವನ್ನು ತಿಳಿಸಬೇಕು.
ಜಿ.ಬಿ.ಜ್ಯೋತಿಗಣೇಶ್ ಶಾಸಕ